July 17, 2026
Friday, July 17, 2026
spot_img

ಯಾರ ಫೋನ್ ಟ್ಯಾಪಿಂಗ್ ಆಗ್ತಿದೆ? ಡಿಕೆಶಿಯದ್ದೋ, ವಿಪಕ್ಷದವರದ್ದೋ? ತನಿಖೆಗೆ ಜೋಶಿ ಪಟ್ಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ರಾಜಕಾರಣದಲ್ಲಿ ಫೋನ್ ಕದ್ದಾಲಿಕೆ ಆರೋಪದ ಕಿಡಿ ಈಗ ದೊಡ್ಡ ಮಟ್ಟದ ಕಿಚ್ಚು ಹಚ್ಚಿದೆ.

ಇತ್ತೀಚೆಗಷ್ಟೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವು ಫೋನ್ ಟ್ಯಾಪಿಂಗ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನನ್ನ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಹಾಲು-ಜೇನಿನಂತಹ ಸಂಬಂಧವಿದೆ. ನಮ್ಮ ನಡುವೆ ಅಸಮಾಧಾನ ಮೂಡಿಸಲು ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ” ಎಂದು ತಿರುಗೇಟು ನೀಡಿದ್ದರು.

ಮುಖ್ಯಮಂತ್ರಿಯವರ ಈ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈಗ ವ್ಯಂಗ್ಯಭರಿತ ಲೇವಡಿ ಮಾಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು “ಫೋನ್ ಟ್ಯಾಪಿಂಗ್ ಮಾಡುತ್ತಿಲ್ಲ ಎಂದು ಗೃಹ ಸಚಿವರು ಇದುವರೆಗೆ ಸ್ಪಷ್ಟವಾಗಿ ನಿರಾಕರಿಸಿಲ್ಲ. ಹಾಗಿದ್ದರೆ ಯಾರ ಫೋನ್ ಟ್ಯಾಪ್ ಆಗುತ್ತಿದೆ? ವಿರೋಧ ಪಕ್ಷದ ನಾಯಕರದ್ದೋ ಅಥವಾ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದ್ದೋ? ಈ ಬಗ್ಗೆ ತಕ್ಷಣ ನ್ಯಾಯಾಂಗ ತನಿಖೆಯಾಗಲಿ” ಎಂದು ಸವಾಲು ಹಾಕಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ‘ಹಾಲು-ಜೇನು’ ಹೇಳಿಕೆಗೆ ಟಾಂಗ್ ಕೊಟ್ಟ ಜೋಶಿ, “ನಿಮ್ಮಿಬ್ಬರ ನಡುವೆ ಇರುವುದು ಹಾಲು-ಜೇನಿನ ಸಂಬಂಧವಲ್ಲ, ಅದು ‘ಆಲ್ಕೋಹಾಲ್ ಮತ್ತು ಜೇನಿನ’ ಸಂಬಂಧವಿರಬೇಕು” ಎಂದು ಕಾಲೆಳೆದಿದ್ದಾರೆ.

ಒಟ್ಟಿನಲ್ಲಿ, ಕುಮಾರಸ್ವಾಮಿ ಹಚ್ಚಿದ ಫೋನ್ ಟ್ಯಾಪಿಂಗ್ ಕಿಚ್ಚಿಗೆ ಈಗ ಜೋಶಿ ತುಪ್ಪ ಸುರಿದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !