ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಗಡಿಯ ಚಕ್ರಬಾವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವೈ.ಜಿ. ಗುಡ್ಡ ಏತ ನೀರಾವರಿ ಯೋಜನೆಯ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ತಮ್ಮ ರಾಜಕೀಯ ಭವಿಷ್ಯದ ಕುರಿತು ನೀಡಿರುವ ಹೇಳಿಕೆ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾವುಕರಾದ ಅವರು, “ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೋ ಇಲ್ಲವೋ ಎಂಬುದು ನನಗೇ ತಿಳಿದಿಲ್ಲ. ಪ್ರಸ್ತುತ ನನ್ನನ್ನು ಬಮೂಲ್ ಅಧ್ಯಕ್ಷನನ್ನಾಗಿ ಮಾಡಲಾಗಿದೆ. ನನಗೆ ಹಾಲು ಮಾರುವ ಜವಾಬ್ದಾರಿ ಕೊಟ್ಟಿದ್ದಾರೆ, ಆ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದೇನೆ,” ಎಂದು ಮಾರ್ಮಿಕವಾಗಿ ನುಡಿದರು. ಸೋಲಿನ ನಂತರದ ಈ ಹೇಳಿಕೆ ಬೆಂಬಲಿಗರಲ್ಲಿ ಅಚ್ಚರಿ ಮೂಡಿಸಿದೆ.
ಕೇವಲ ರಾಜಕೀಯ ಮಾತುಗಳಿಗಷ್ಟೇ ಸೀಮಿತವಾಗದ ಸುರೇಶ್, ಅಭಿವೃದ್ಧಿ ಕಾರ್ಯಗಳ ಕುರಿತು ಹೆಮ್ಮೆಯಿಂದ ಮಾತನಾಡಿದರು.
115 ಕಿ.ಮೀ ದೂರದಿಂದ ನೀರು ತಂದು ಮಾಗಡಿಯ 18 ಕೆರೆಗಳನ್ನು ತುಂಬಿಸುವ ಈ ಬೃಹತ್ ಯೋಜನೆ ಒಂದು ಕಾಲದಲ್ಲಿ ಕನಸಾಗಿತ್ತು. ಆದರೆ ಕೊಟ್ಟ ಮಾತಿನಂತೆ ನಾವು ಅದನ್ನು ನನಸು ಮಾಡುತ್ತಿದ್ದೇವೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ನೀರಿನ ದಾಹ ತಣಿಸಲು ಡಿ.ಕೆ. ಶಿವಕುಮಾರ್ ಅವರು ಶ್ರಮಿಸುತ್ತಿದ್ದು, ಸತ್ತೇಗಾಲ ನೀರಾವರಿ ಯೋಜನೆಯು ಮುಂದಿನ ಕೆಲವೇ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದರು.
ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ನಾವು ಜನರ ಮುಂದೆ ಸುಳ್ಳು ಹೇಳಿ, ಕಣ್ಣೀರು ಸುರಿಸಿ ಮತ ಕೇಳುವವರಲ್ಲ. ಕೊಟ್ಟ ಮಾತನ್ನು ಕೆಲಸದ ಮೂಲಕ ಸಾಬೀತುಪಡಿಸುವವರು. ಅಭಿವೃದ್ಧಿಯೇ ನಮ್ಮ ಉತ್ತರ,” ಎಂದು ತಿರುಗೇಟು ನೀಡಿದರು.



