March 4, 2026
Wednesday, March 4, 2026
spot_img

ಕಮಲ ಪಡೆಯಲ್ಲಿ ಹೊಸ ಸಂಚಲನ: ಧಾರವಾಡ ವಿಭಾಗದ ಸಂಘಟನಾ ಚುಕ್ಕಾಣಿ ಹಿಡಿದ ಜಯತೀರ್ಥ ಕಟ್ಟಿ

ಹೊಸದಿಗಂತ ಹುಬ್ಬಳ್ಳಿ:

ಮುಂಬರುವ ರಾಜಕೀಯ ಚಟುವಟಿಕೆಗಳು ಹಾಗೂ ಚುನಾವಣಾ ಸವಾಲುಗಳನ್ನು ಎದುರಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಜಯತೀರ್ಥ ಕಟ್ಟಿ ಅವರನ್ನು ಧಾರವಾಡ ವಿಭಾಗದ ಸಂಘಟನಾ ಪ್ರಭಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ದಶಕಗಳಿಂದ ಬಿಜೆಪಿಯ ವಿವಿಧ ಘಟಕಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ಇವರು, ಪಕ್ಷದ ಶಿಸ್ತಿನ ಹಾಗೂ ನಿಷ್ಠಾವಂತ ನಾಯಕರಾಗಿದ್ದಾರೆ.

ರಾಷ್ಟ್ರೀಯ ವಿಚಾರಧಾರೆ ಮತ್ತು ಪಕ್ಷದ ಸಿದ್ಧಾಂತಗಳನ್ನು ತಳಮಟ್ಟದ ಕಾರ್ಯಕರ್ತರಿಗೆ ಮನದಟ್ಟು ಮಾಡುವಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ.

ದೇಶದ ಇತಿಹಾಸ ಮತ್ತು ವೀರರ ಬಲಿದಾನಗಳ ಬಗ್ಗೆ ಕಾರ್ಯಕರ್ತರಲ್ಲಿ ಜಾಗೃತಿ ಮೂಡಿಸುವ ಮೂಲಕ ಪಕ್ಷದ ಸಂಘಟನಾ ಶಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.

ಈ ಹಿಂದೆ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿರುವ ಕಟ್ಟಿ ಅವರ ಅನುಭವವನ್ನು ಬಳಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಧಾರವಾಡ ವಿಭಾಗದಲ್ಲಿ ಪಕ್ಷದ ಚಟುವಟಿಕೆಗಳಿಗೆ ವೇಗ ನೀಡಲು ಮತ್ತು ಮುಂಬರುವ ಚುನಾವಣೆಗಳ ದೃಷ್ಟಿಯಿಂದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ವಿಜಯೇಂದ್ರ ಅವರು ಈ ಪ್ರಮುಖ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದಾರೆ.

“ಪಕ್ಷದ ಸಂಘಟನೆಯಲ್ಲಿ ಜಯತೀರ್ಥ ಕಟ್ಟಿ ಅವರ ದೀರ್ಘಕಾಲದ ಅನುಭವ ಮತ್ತು ಸಿದ್ಧಾಂತದ ಮೇಲಿನ ಬದ್ಧತೆ ಧಾರವಾಡ ವಿಭಾಗದಲ್ಲಿ ಬಿಜೆಪಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ,” ಎಂದು ಬಿ.ವೈ. ವಿಜಯೇಂದ್ರ ಅವರು ತಮ್ಮ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !