March 7, 2026
Saturday, March 7, 2026
spot_img

ಕರಾವಳಿ ಟು ಮಲೆನಾಡು: ಸಿದ್ದರಾಮಯ್ಯ ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ‘ಹೈಟೆಕ್’ ಮೆರುಗು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಕರಾವಳಿ ತೀರದ ಸಮಗ್ರ ಅಭಿವೃದ್ಧಿಯಿಂದ ಹಿಡಿದು ಮಲೆನಾಡಿನ ಗಿರಿಶಿಖರಗಳವರೆಗೆ ಪ್ರವಾಸಿಗರನ್ನು ಸೆಳೆಯಲು ಹಲವು ಹೈಟೆಕ್ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ರಾಜ್ಯದ ಸಮುದ್ರ ತೀರಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು ‘ಸಮಗ್ರ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ’ ಜಾರಿಗೆ ತರಲಾಗುವುದು. ಜಲಸಾಹಸ ಕ್ರೀಡೆಗಳು ಮತ್ತು ವಾಯುಯಾನ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಲಾಗುವುದು.

ಪ್ರವಾಸಿಗರಿಗಾಗಿ ಸೀ ಪ್ಲೇನ್, ಹೆಲಿಟ್ಯಾಕ್ಸಿ, ಜಾಯ್ ರೈಡ್ ಹಾಗೂ ನದಿಗಳಲ್ಲಿ ಸಂಚರಿಸುವ ‘ರಿವರ್ ಕ್ರೂಸ್’ ಸೇವೆಗಳಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ.

ಚಾರಣಿಗರ ನೆಚ್ಚಿನ ತಾಣವಾದ ಮುಳ್ಳಯ್ಯನಗಿರಿ-ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ಆಕರ್ಷಕ ರೋಪ್‌ವೇ ನಿರ್ಮಿಸಲು ನಿರ್ಧರಿಸಲಾಗಿದೆ.

ಗದಗ ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತು ಐತಿಹಾಸಿಕ ತಾಣಗಳನ್ನು ಬೆಸೆಯಲು ‘ಗದಗ-ಕಪ್ಪತ್ತಗುಡ್ಡ-ಲಕ್ಕುಂಡಿ ಪ್ರವಾಸೋದ್ಯಮ ಸರ್ಕ್ಯೂಟ್’ ಅಭಿವೃದ್ಧಿಪಡಿಸಲಾಗುವುದು.

ಪ್ರವಾಸಿಗರೊಂದಿಗೆ ಉತ್ತಮವಾಗಿ ವ್ಯವಹರಿಸಲು ಮತ್ತು ಸುರಕ್ಷತೆ ಕಾಪಾಡಲು ಟ್ಯಾಕ್ಸಿ ಚಾಲಕರು, ಆಟೋ ಚಾಲಕರು ಹಾಗೂ ಪ್ರವಾಸೋದ್ಯಮ ಪೊಲೀಸರಿಗೆ ವಿಶೇಷ ಕೌಶಲ್ಯ ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ.

ಈ ಯೋಜನೆಗಳ ಮೂಲಕ ಕರ್ನಾಟಕವನ್ನು ದೇಶದ ಅಗ್ರಗಣ್ಯ ಪ್ರವಾಸಿ ರಾಜ್ಯವನ್ನಾಗಿ ಮಾಡುವುದು ಸರ್ಕಾರದ ಗುರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !