ಹೊಸದಿಗಂತ ವರದಿ ಚಿತ್ರದುರ್ಗ:
ಜಗತ್ತಿಗೆ ಅನ್ನ ಕೊಡುವ ಅನ್ನದಾತ ಉಪವಾಸ ಬೀಳಬೇಕಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ನೀಡದ ಸರ್ಕಾರಗಳನ್ನೇ ಬೀಳಿಸುವ ತಾಕತ್ತು ಪ್ರದರ್ಶಿಸಬೇಕು ಎಂದು ಮಠಾಧೀಶರು, ವಿವಿಧ ಸಂಘಟನೆಗಳ ಮುಖಂಡರು ಉಪವಾಸನಿರತ ರೈತರಿಗೆ ಕಿವಿಮಾತು ಹೇಳಿದರು.
ಒನಕೆ ಓಬವ್ವ ವೃತ್ತದಲ್ಲಿ ಮಾ.೦2 ರಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಗಳು, ಮುಖಂಡರ ಒತ್ತಾಸೆಗೆ ಮಣಿದು ಉಪವಾಸ ನಿರತ ರೈತ ಮುಖಂಡ ಕೆ.ಟಿ.ತಿಪ್ಪೇಸ್ವಾಮಿ ಸ್ವಾಮೀಜಿ ಅವರು ತಂದಿದ್ದ ಎಳೆನೀರು ಸೇವಿಸಿದರು. ಈ ಮೂಲಕ ಐದು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ತೆರೆ ಎಳೆಯಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಈ ಬಾರಿ ಬಜೆಟ್‌ನಲ್ಲಿ 5 ಸಾವಿರ ಕೋಟಿ ರೂ. ಅನುದಾನ ಭದ್ರಾ ಯೋಜನಗೆ ಮೀಸಲಿಡಬೇಕೆಂದು ಆಗ್ರಹಿಸಲಾಗಿತ್ತು. ಜೊತೆಗೆ ಸಚಿವರು, ಶಾಸಕರುಗಳು ಮುಖ್ಯಮಂತ್ರಿ ಮೇಲೆ ಒತ್ತಡ ತಂದಿದ್ದರು. ಆದರೆ, ಬಜೆಟ್‌ನಲ್ಲಿ ಯೋಜನೆಯನ್ನು 2027ರೊಳಗೆ ಪೂರ್ಣಗೊಳಿಸುವುದಾಗಿ ಹೇಳಿದ್ದರೂ ಹಣವನ್ನು ಹಂಚಿಕೆ ಮಾಡಿಲ್ಲದಿರುವುದು ಬೇಸರ ತರಿಸಿದೆ ಎಂದರು.
ಸಿದ್ದಯ್ಯನಕೋಟೆ ಶ್ರೀ ಮಾತನಾಡಿ, ರೈತರು ಉಪವಾಸ ಕುಳಿತಿರುವುದು ಕೇಳಿ ಮನಸ್ಸಿಗೆ ನೋವಾಯಿತು. ಅನ್ನದಾತ ಉಪವಾಸ ಇರಬಾರದು. ಸರ್ಕಾರದ ಮೇಲೆ ಒತ್ತಡ ತರಲು ಬೇರೆ ಮಾರ್ಗದ ಹೋರಾಟ ಕೈಗೊಳ್ಳಬೇಕು. ಕೃಷಿಕರ ಪರಿಸ್ಥಿತಿ ತೀವ್ರ ಅಧೋಗತಿಯಲ್ಲಿದೆ. ಕರೆಂಟ್ ಇದ್ದರೆ ನೀರು ಇರಲ್ಲ, ನೀರಿದ್ದರೆ ಕರೆಂಟ್ ಇರುವುದಿಲ್ಲ. ಈ ಮಧ್ಯೆ ಬೆಳೆಗೆ ಬೆಲೆ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತ ಜಗತ್ತಿಗೆ ಅನ್ನ ನೀಡುತ್ತಿದ್ದಾನೆಂದರೆ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚು ಅನುದಾನ ಕೊಟ್ಟು ನೀರು ಹರಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ:
ರೈತಸಂಘ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಕೃಷಿ ಕ್ಷೇತ್ರ ಉಳಿಸಿಕೊಳ್ಳದಿದ್ದರೆ ಇಡೀ ಜಗತ್ತು ನಾಶಗೊಳ್ಳಲಿದೆ. ಆದರೆ, ಈ ಪರಿಜ್ಞಾನ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಇಲ್ಲದಿರುವುದು ದುಃಖದ ಸಂಗತಿ. ಭದ್ರಾ ಮೇಲ್ದಂಡೆ ಯೋಜನೆಗೆ ಹಣ ತರುವಲ್ಲಿ ರಾಜ್ಯದ ಮೇಲೆ ಶಾಸಕರು, ಕೇಂದ್ರದ ಮೇಲೆ ಸಂಸದರು ಒತ್ತಡ ತರಬೇಕು. ಈ ಕುರಿತು ಸರ್ಕಾರಗಳು ಸ್ಪಷ್ಟ ಹೇಳಿಕೆ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ. ಲಾಠಿ ಏಟು ತಿನ್ನಲು, ಜೈಲಿಗೆ ಹೋಗಲು ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ಹಿರಿಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಜಿಲ್ಲೆ ಮಠಾಧೀಶರ ತವರೂರು. ಕೆಲ ಸ್ವಾಮೀಜಿಗಳು ತಮ್ಮ ವ್ಯಾಪ್ತಿಯಲ್ಲಿನ ಕೆರೆ ತುಂಬಿಸಿ ಹಸಿರುಗೊಳಿಸಿದ್ದಾರೆ. ಅದೇ ರೀತಿ ಇಡೀ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸುವ ಮಹತ್ವದ ಕಾರ್ಯಕ್ಕೆ ದಿಟ್ಟ ಹೆಜ್ಜೆ ಇಡಬೇಕೆಂದು ತಿಳಿಸಿದರು.
ನೀರಾವರಿ ಹೋರಾಟ ಸಮಿತಿ ಸಂಚಾಲಕ ನರೇನಹಳ್ಳಿ ಅರುಣ್‌ಕುಮಾರ್, ಮತ್ತೋರ್ವ ಸಂಚಾಲಕ ಆರ್.ಶೇಷಣ್ಣಕುಮಾರ್ ಮಾತನಾಡಿದರು. ಮುಖಂಡರಾದ ಕೊರಟಗೆರೆ ಮಹೇಶ್ವರಪ್ಪ, ರಂಗಸ್ವಾಮಿ, ಚಿತ್ತಪ್ಪ, ನಿರಂಜನಮೂರ್ತಿ, ರೆಡ್ಡಿಹಳ್ಳಿ ವೀರಣ್ಣ, ಇಂಧೂದರ, ಜಯಣ್ಣ, ಕರಿಸಿದ್ದಯ್ಯ, ಚಂದ್ರಮೌಳಿ, ಸತೀಶ್, ಪ್ರಶಾಂತ್ ರೆಡ್ಡಿ, ಮಲ್ಲಾಪುರ ತಿಪ್ಪೇಸ್ವಾಮಿ, ತಿಮ್ಮಣ್ಣ, ಬಸ್ತಿಹಳ್ಳಿ ಸುರೇಶ್‌ಬಾಬು, ನೀರಾವರಿ ಹೋರಾಟ ಸಮಿತಿ ಸಂಚಾಲಕ ಚಳ್ಳಕೆರೆ ಬಸವರಾಜ್, ಜೋಗಿಮಟ್ಟಿ ಮಹೇಶಬಾಬು ಮತ್ತಿತರರು ಹಾಜರಿದ್ದರು.



