March 7, 2026
Saturday, March 7, 2026
spot_img

ನಿಯಂತ್ರಣ ತಪ್ಪಿದ ಲಾರಿ ಅರಳಿ ಮರಕ್ಕೆ ಡಿಕ್ಕಿ: ಕೇರಳದ ಇಬ್ಬರು ಯುವಕರ ದುರ್ಮರಣ

ಹೊಸದಿಗಂತ ತುಮಕೂರು:

ಜಿಲ್ಲೆಯ ನಾಗವಲ್ಲಿ ಸಮೀಪದ ರಂಗಾಪುರ ಭಾಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೋಪನಹಳ್ಳಿ ಗೇಟ್ ಬಳಿ ವೇಗವಾಗಿ ಬಂದ ಲಾರಿಯೊಂದು ರಸ್ತೆ ಪಕ್ಕದ ಅರಳಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಕೇರಳ ಮೂಲದ ರಷೀದ್ ಅಲಿ (25) ಮತ್ತು ಅಮೀನ್ (23) ಮೃತಪಟ್ಟ ದುರ್ದೈವಿಗಳು. ಇವರು ಆಂಧ್ರಪ್ರದೇಶದಿಂದ ಕೇರಳಕ್ಕೆ ಲಾರಿಯಲ್ಲಿ ಕಡಪ ಕಲ್ಲುಗಳನ್ನು ಸಾಗಿಸುತ್ತಿದ್ದರು. ಸೋಪನಹಳ್ಳಿ ಗೇಟ್ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಬೃಹತ್ ಅರಳಿ ಮರಕ್ಕೆ ವೇಗವಾಗಿ ಅಪ್ಪಳಿಸಿದೆ. ಡಿಕ್ಕಿಯ ತೀವ್ರತೆಗೆ ಲಾರಿ ಜಖಂಗೊಂಡಿದ್ದು, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಅಪಘಾತ ಸಂಭವಿಸಿದ ಕೂಡಲೇ ಕುಣಿಗಲ್-ತುಮಕೂರು ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನ ದಟ್ಟಣೆ ಉಂಟಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಬ್ಬೂರು ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

“ಈ ರಸ್ತೆಯಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿವೆ. ಅದೃಷ್ಟವಶಾತ್ ಅಪಘಾತ ನಡೆದ ಸಮಯದಲ್ಲಿ ಮರದ ಕೆಳಗೆ ಯಾರೂ ಇರಲಿಲ್ಲ, ಇಲ್ಲದಿದ್ದರೆ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿತ್ತು. ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಈ ಹೆದ್ದಾರಿಯಲ್ಲಿ ‘ಹಂಪ್ಸ್’ ಹಾಗೂ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು,” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !