ಹೊಸ ದಿಗಂತ ವರದಿ,ಚಿತ್ರದುರ್ಗ:
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ದಲಿತರು ಶೋಷಿತರನ್ನು ವಂಚಿಸುತ್ತಿರುವ ಕಪಟ ನಾಟಕದ ಸರ್ಕಾರ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ಎಸ್.ಸಿ., ಎಸ್.ಟಿ.ಗೆ ಮಾಡಿರುವ ಮೀಸಲಾತಿ ಅನ್ಯಾಯ ವಿರುದ್ದ ಬೃಹತ್ ಜನಾಂದೋಲನ ಕುರಿತು ನಗರದ ವಾಲ್ಮೀಕಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗದವರನ್ನು ಕೇವಲ ವೋಟ್‌ಬ್ಯಾಂಕ್ ಮಾಡಿಕೊಂಡಿದೆ. ಇವರಿಗೆ ಏನೇ ಅನ್ಯಾಯ ಮಾಡಿದರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಾರೆ ಎಂಬ ನಂಬಿಕೆ. ಕಾಂಗ್ರೆಸ್ ಪಕ್ಷದ್ದು. ಹಾಗಾಗಿ ಪದೇ ಪದೇ ಈ ಜನಾಂಗಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಲೇ ಬಂದಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಮಾತೆತ್ತಿದರೆ ಅಂಬೇಡ್ಕರ್, ಸಂವಿಧಾನ ಎಂದು ಹೇಳುತ್ತಾರೆ. ಮಂತ್ರ ಪಠಣ ಮಾಡಿದಂತೆ ಪ್ರತಿದಿನ ಅನೇಕ ಬಾರಿ ಅಂಬೇಡ್ಕರ್ ಹೆಸರನ್ನು ಜಪಿಸುತ್ತಾರೆ. ಆದರೆ ಅವರು ನೀಡಿದ ಸಂವಿಧಾನದ ಆಶಯಗಳನ್ನು ಜಾರಿ ತರುವಲ್ಲಿ ಹಿಂದೇಟು ಹಾಕುತ್ತಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲಿರುವ ಎಸ್.ಸಿ., ಎಸ್.ಟಿ. ಜನಪ್ರತಿನಿಧಿಗಳಿಗೆ ಸ್ವಾಭಿಮಾನ, ಮಾನ, ಮರ್ಯಾದೆ ಇದ್ದಲ್ಲಿ ರಾಜೀನಾಮೆ ಬಿಸಾಕಿ ಹೊರಬರಲಿ ಎಂದು ಹೇಳಿದರು.
ಕೊಳ್ಳೆಗಾಲದ ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಸರ್ಕಾರ ಹಾಗೂ ಶಾಸಕಾಂಗದಲ್ಲಿ ನಮ್ಮ ಹಕ್ಕುಗಳಿಗೆ ರಕ್ಷಣೆ ಆದಿದ್ದಲ್ಲಿ ಜನರ ಬಳಿ ಹೋಗಬೇಕೆಂದು ಅಂಬೇಡ್ಕರ್ ಹೇಳಿದ್ದಾರೆ. ಅದರಂತೆ ಈಗ ಮೀಸಲಾತಿ ಜಾರಿ ಕುರಿತು ಚಿತ್ರದುರ್ಗ ಕೇಂದ್ರ ಮಾಡಿಕೊಂಡು ಹೋರಾಟ ಮಾಡೋಣ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲು ಸಂವಿಧಾನದಲ್ಲಿ ಅವಕಾಶವಿದೆ. ಯಾವ ನ್ಯಾಯಾಲಯ ಈ ಕುರಿತು ಪ್ರಶ್ನೆ ಮಾಡಿಲ್ಲ. ಮೀಸಲಾತಿ ಶೇಕಡಾ ೫೦ ಮೀರಿದ ಬಗ್ಗೆ ವಿವರಣೆ ಕೇಳಿದೆ. ಆದರೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು.
ಮೀಸಲಾತಿ ಹೆಚ್ಚಳ ಕುರಿತು ನಾಯಕ ಸ್ಟೂಡೆಂಟ್ ವೆಲ್ಫೇರ್ ಫೆಡರೇಷನ್ ಕೋರ್ಟ್‌ಗೆ ಅರ್ಜಿ ಹಾಕಿತು. ಇದನ್ನು ಪರಿಶೀಲಿಸಲು ಹೈಕೋರ್ಟ್ ಅಂದಿನ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸಾರ್ಕರಕ್ಕೆ ನೀಡಿತು. ಮೀಸಲಾತಿ ಹೆಚ್ಚಳ ಕುರಿತು ವಿಧಾನಸಭೆಯಲ್ಲಿ ಆಕ್ಟ್ ಆಗಿದೆ. ಆದರೆ ಮೀಸಲಾತಿ ಜಾರಿ ಮಾಡಬೇಕಾದ ಅವಿವೇಕಿಗಳು ಗೌರ್ನರ್ ಹಾಗೂ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಶೋಷಿತರ ಬಾಯಿಗೆ ಮಣ್ಣಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮಾಜಿ ಸಚಿವ ಶಿವನಗೌಡ ನಾಯಕ ಮಾತನಾಡಿ, ಮೀಸಲಾತಿ ಹೆಚ್ಚಳ ಮಾಡುವುದಾಗಿ ರಾಜ್ಯಪಾಲರ ಅಂಕಿತ ಪಡೆಯುತ್ತಾರೆ. ಬಳಿಕ ಅದೇ ದಿನ ಮೀಸಲಾತಿ ಹೆಚ್ಚಳ ಮಾಡದಿರಲು ತೀರ್ಮಾನ ಕೈಗೊಳ್ಳುತ್ತಾರೆ. ದಲಿತ ಸಚಿವರೇ ದಲಿತರಿಗೆ ವೈರಿಗಳಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ರಾಮಯ್ಯ ನಂಬಿಸಿ ಶೋಷಿತರ ಕುತ್ತಿಗೆ ಕೊಯ್ದಿದ್ದಾರೆ. ಮೀಸಲಾತಿ ಕುರಿತು ಒಂದೂವರೆ ಕೋಟಿ ಜನಸಂಖ್ಯೆಗೆ ಅನ್ಯಾಯವಾದರೂ ರಾಜ್ಯ ಸರ್ಕಾರ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕೆಲಸ ಮಾಡಿಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಗ್ರ ಹೋರಾಟ ಮಾಡಬೇಕು. ಇದರಲ್ಲಿ ನಮ್ಮ ಪ್ರಾಣ ಹೋದರೂ ಹಿಂಜರಿಯಬಾರದು ಎಂದು ಭಾವುಕರಾಗಿ ನುಡಿದರು.
ಮಾಜಿ ಸಂಸದ ಡಾ.ಉಮೇಶ್ ಜಾದವ್, ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ರಾಜುಗೌಡ, ವಿ.ಪ. ಸದಸ್ಯರಾದ ಹೇಮಲತಾ, ಎಸ್.ಟಿ. ಮೋರ್ಚ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಎಸ್.ಸಿ ಮೋರ್ಚ ರಾಜ್ಯಾಧ್ಯಕ್ಷ ಸಿಮೆಂಟ್ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎಸ್.ಸಿ., ಎಸ್.ಟಿ. ಮುಖಂಡರು ಹಾಜರಿದ್ದರು.



