Saturday, August 30, 2025

ಬಿಸಿಸಿಐ ಅಧ್ಯಕ್ಷ ಸ್ಥಾನ ಬದಲಾವಣೆ? ರಾಜೀನಾಮೆ ಕೊಡ್ತಾರಾ ರೋಜರ್ ಬಿನ್ನಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಮತ್ತು ಪ್ರಭಾವಿ ಮಂಡಳಿಯಾದ ಬಿಸಿಸಿಐ (BCCI) ಆಡಳಿತದಲ್ಲಿ ಶೀಘ್ರದಲ್ಲೇ ದೊಡ್ಡ ಬದಲಾವಣೆ ಸಂಭವಿಸಲಿದೆ. ವರದಿಗಳ ಪ್ರಕಾರ, ಪ್ರಸ್ತುತ ಬಿಸಿಸಿಐ ಅಧ್ಯಕ್ಷರಾಗಿರುವ ರೋಜರ್ ಬಿನ್ನಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಅವರ ಬದಲಿಗೆ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರನ್ನು ತಾತ್ಕಾಲಿಕವಾಗಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಿಸಿಸಿಐ ಸಂವಿಧಾನದ ಪ್ರಕಾರ, ಯಾವುದೇ ಅಧಿಕಾರಿಯು 70 ವರ್ಷ ವಯಸ್ಸು ತಲುಪಿದ ಬಳಿಕ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಾಗುವುದಿಲ್ಲ. ಇದೀಗ 70 ವರ್ಷ ತುಂಬಿರುವ ರೋಜರ್ ಬಿನ್ನಿ ಅವರು ಹುದ್ದೆಯಿಂದ ಹಿಂದೆ ಸರಿಯಬೇಕಾಗುತ್ತದೆ. 2022ರಲ್ಲಿ ಸೌರಭ್ ಗಂಗೂಲಿ ಬದಲಿಗೆ ಅಧ್ಯಕ್ಷರಾಗಿದ್ದ ಬಿನ್ನಿ, 1983ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯರಾಗಿದ್ದರು.

2020ರಿಂದ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಅವರು ಕೆಲವು ತಿಂಗಳುಗಳ ಕಾಲ ಹಂಗಾಮಿ ಅಧ್ಯಕ್ಷರ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಆಗಸ್ಟ್ 27ರಂದು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಟೀಂ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವದ ವಿಷಯದಲ್ಲೂ ಚರ್ಚೆ ನಡೆದಿದೆ. ಡ್ರೀಮ್ 11 ಕಂಪನಿ ಪ್ರಾಯೋಜಕತ್ವದಿಂದ ಹಿಂದೆ ಸರಿದ ಕಾರಣ ಹೊಸ ಪ್ರಾಯೋಜಕ ಕಂಪನಿಯನ್ನು ಹುಡುಕುವ ಕಾರ್ಯ ಪ್ರಗತಿಯಲ್ಲಿದೆ.

ಮುಂದಿನ ತಿಂಗಳು ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆ (AGM) ಮತ್ತು ಚುನಾವಣೆಗಳನ್ನು ನಡೆಸಲಿದೆ. ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ ಇನ್ನೂ ಸಂಪೂರ್ಣ ಜಾರಿಗೆ ಬಾರದ ಕಾರಣ, ಪ್ರಸ್ತುತ ಸಂವಿಧಾನದ ಅಡಿಯಲ್ಲಿ ಚುನಾವಣೆ ನಡೆಯಲಿದೆ. ಕಾನೂನು ಜಾರಿಗೆ ಬರಲು ನಾಲ್ಕು-ಐದು ತಿಂಗಳುಗಳು ಬೇಕಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ