March 12, 2026
Thursday, March 12, 2026
spot_img

ಪಲ್ಯ, ಗ್ರೇವಿ & More 33 | ಮಂಗಳೂರು ಸ್ಟೈಲ್ ಜೀಗುಜ್ಜೆ ಸಾಂಬಾರ್: ಇಡ್ಲಿ, ಪುಂಡಿ ಜೊತೆ ಸೂಪರ್ ಕಾಂಬಿನೇಶನ್

ಕರಾವಳಿ ಕರ್ನಾಟಕದ ಅಡುಗೆಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಪದಾರ್ಥಗಳಲ್ಲಿ ಜೀಗುಜ್ಜೆ ಸಾಂಬಾರ್ ಕೂಡ ಒಂದು. ಇದನ್ನು ಕೆಲವರು ದೀವಿ ಹಲಸು ಎಂದೂ ಕರೆಯುತ್ತಾರೆ. ತೆಂಗಿನಕಾಯಿ ಮತ್ತು ವಿಶೇಷ ಮಸಾಲೆಗಳ ಜೊತೆ ತಯಾರಾಗುವ ಈ ಸಾಂಬಾರ್ ಬಿಸಿ ಅನ್ನ, ಪುಂಡಿ, ದೋಸೆ ಜೊತೆ ತಿಂದರೆ ಊಟದ ರುಚಿ ಇನ್ನಷ್ಟು ಹೆಚ್ಚುತ್ತದೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಕರಾವಳಿ ಸ್ಟೈಲ್ ಸಾಂಬಾರ್ ಹೇಗೆ ಮಾಡುವುದು ಎಂಬುದನ್ನು ನೋಡೋಣ.

ಬೇಕಾಗುವ ಸಾಮಗ್ರಿಗಳು

ಜೀಗುಜ್ಜೆ – 1 ಮಧ್ಯಮ ಗಾತ್ರ (ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿದ್ದು)
ತೊಗರಿಬೇಳೆ – 1 ಕಪ್
ಒಣ ಮೆಣಸಿನಕಾಯಿ – 10 ರಿಂದ 12
ಕೊತ್ತಂಬರಿ ಬೀಜ – 4 ರಿಂದ 5 ಚಮಚ
ಜೀರಿಗೆ – 2 ಚಮಚ
ಮೆಂತ್ಯ – ½ ಚಮಚ
ಉದ್ದಿನಬೇಳೆ – 2 ಚಮಚ
ತೆಂಗಿನ ತುರಿ – 2 ಕಪ್
ಹುಣಸೆಹಣ್ಣು – ಸ್ವಲ್ಪ
ಬೆಲ್ಲ – ಸ್ವಲ್ಪ
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು

ಒಗ್ಗರಣೆಗೆ:

ತೆಂಗಿನ ಎಣ್ಣೆ, ಸಾಸಿವೆ, ಕರಿಬೇವು, ಒಣ ಮೆಣಸಿನಕಾಯಿ, ಇಂಗು

ಮಾಡುವ ವಿಧಾನ

ಮೊದಲು ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಸ್ವಲ್ಪ ಅರಿಶಿನ ಹಾಕಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಿ. ನಂತರ ಜೀಗುಜ್ಜೆ ತುಂಡುಗಳನ್ನು ಒಂದು ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿ.

ಈ ನಡುವೆ ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ ಹಾಗೂ ಉದ್ದಿನಬೇಳೆಯನ್ನು ಹುರಿಯಿರಿ. ನಂತರ ಇದಕ್ಕೆ ತೆಂಗಿನ ತುರಿ ಮತ್ತು ಹುಣಸೆಹಣ್ಣು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

ಬೇಯಿಸಿದ ಜೀಗುಜ್ಜೆ ತುಂಡುಗಳಿಗೆ ಈ ಮಸಾಲೆ ಪೇಸ್ಟ್ ಸೇರಿಸಿ ಚೆನ್ನಾಗಿ ಕುದಿಸಿ. ಬಳಿಕ ಬೇಯಿಸಿದ ತೊಗರಿಬೇಳೆ, ಸ್ವಲ್ಪ ಬೆಲ್ಲ ಮತ್ತು ಉಪ್ಪು ಸೇರಿಸಿ ಮತ್ತೊಮ್ಮೆ ಕುದಿಯಲು ಬಿಡಿ.

ಕೊನೆಗೆ ತೆಂಗಿನ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಒಣ ಮೆಣಸಿನಕಾಯಿ ಹಾಗೂ ಇಂಗಿನ ಒಗ್ಗರಣೆ ಕೊಟ್ಟರೆ ಕರಾವಳಿ ಶೈಲಿಯ ಜೀಗುಜ್ಜೆ ಸಾಂಬಾರ್ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !