ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತವು ತನ್ನ ಇಂಧನ ಭದ್ರತೆ ಮತ್ತು ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಾಜತಾಂತ್ರಿಕ ಮಟ್ಟದಲ್ಲಿ ಚುರುಕಿನ ಹೆಜ್ಜೆಗಳನ್ನು ಇಟ್ಟಿದೆ. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಇರಾನಿನ ವಿದೇಶಾಂಗ ಸಚಿವರೊಂದಿಗೆ ಇತ್ತೀಚಿನ ದಿನಗಳಲ್ಲಿ ಮೂರು ಸುತ್ತಿನ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಭಾರತೀಯ ಧ್ವಜ ಹೊತ್ತ ಹಡಗುಗಳ ಸುರಕ್ಷತೆ ಮತ್ತು ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಕುರಿತು ಚರ್ಚಿಸಲಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಟ್ಯಾಂಕರ್‌ಗಳ ಮುಕ್ತ ಸಂಚಾರಕ್ಕೆ ಇರಾನ್ ಅನುಮತಿ ನೀಡಿದೆಯೇ ಎಂಬ ಕುರಿತು ಈಗಲೇ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಚಿವಾಲಯ ನಿರಾಕರಿಸಿದೆ.
ಸದ್ಯ ಇರಾನ್‌ನಲ್ಲಿ ಸುಮಾರು 9,000 ಭಾರತೀಯ ಪ್ರಜೆಗಳು ನೆಲೆಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಯಾತ್ರಿಕರು ಸೇರಿದ್ದಾರೆ. ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಅನೇಕ ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ.
ಟೆಹ್ರಾನ್ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿದ್ದ ಭಾರತೀಯರನ್ನು ಸುರಕ್ಷಿತ ನಗರಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವಾಣಿಜ್ಯ ವಿಮಾನಗಳ ಮೂಲಕ ಮನೆಗೆ ಮರಳಲು ಇಚ್ಛಿಸುವವರಿಗೆ ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ಗಡಿಗಳ ಮೂಲಕ ಪ್ರಯಾಣಿಸಲು ವೀಸಾ ಮತ್ತು ಭೂಸಾರಿಗೆ ಸೌಲಭ್ಯಗಳನ್ನು ಭಾರತೀಯ ರಾಯಭಾರ ಕಚೇರಿ ಕಲ್ಪಿಸುತ್ತಿದೆ.
ಮಧ್ಯಪ್ರಾಚ್ಯದ ಅಸ್ಥಿರ ಪರಿಸ್ಥಿತಿಯ ನಡುವೆಯೂ ಭಾರತವು ತನ್ನ ಆರ್ಥಿಕ ಹಿತಾಸಕ್ತಿ ಮತ್ತು ಪ್ರಜೆಗಳ ಹಿತರಕ್ಷಣೆಗೆ ಅಗ್ರಸ್ಥಾನ ನೀಡುತ್ತಿದೆ ಎಂಬುದು ಈ ಮಾತುಕತೆಗಳಿಂದ ಸ್ಪಷ್ಟವಾಗಿದೆ.



