ಹೊಸದಿಗಂತ ಯಾದಗಿರಿ:
ಬೇಸಿಗೆಯ ಧಗೆಯಿಂದ ಪಾರಾಗಲು ಕಾಲುವೆಗೆ ಈಜಲು ತೆರಳಿದ ಕೃಷಿ ಕಾಲೇಜಿನ ವಿದ್ಯಾರ್ಥಿಯೊಬ್ಬ ನೀರಿನ ಸೆಳವಿಗೆ ಸಿಲುಕಿ ನಾಪತ್ತೆಯಾಗಿರುವ ಕರುಣಾಜನಕ ಘಟನೆ ಶಹಾಪುರ ತಾಲೂಕಿನ ಭೀಮರಾಯನ ಗುಡಿಯಲ್ಲಿ ನಡೆದಿದೆ.
ಭೀಮರಾಯನಗುಡಿ ಕೃಷಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹರೀಶ್ ರೆಡ್ಡಿ (19) ನೀರಿನಲ್ಲಿ ಮುಳುಗಿದ ದುರ್ದೈವಿ. ಗುರುವಾರ ಬಿಡುವಿನ ಸಮಯದಲ್ಲಿ ತನ್ನ ಸ್ನೇಹಿತರೊಂದಿಗೆ ಸೇರಿ ಸ್ಥಳೀಯ ಕೆಬಿಜೆಎನ್ನೆಲ್ ಕಾಲುವೆಗೆ ಈಜಾಡಲು ತೆರಳಿದ್ದರು. ಈಜುತ್ತಿದ್ದ ಸಂದರ್ಭದಲ್ಲಿ ನೀರಿನ ರಭಸಕ್ಕೆ ಸಿಲುಕಿದ ಹರೀಶ್, ದಡ ಸೇರಲಾಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಭೀಮರಾಯನಗುಡಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ತಂಡ ಸ್ಥಳಕ್ಕೆ ಧಾವಿಸಿದೆ. ಪ್ರಸ್ತುತ ಕಾಲುವೆಯಲ್ಲಿ ಹರೀಶ್ ರೆಡ್ಡಿ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ಸ್ಥಳದಲ್ಲಿ ವಿದ್ಯಾರ್ಥಿಯ ಸ್ನೇಹಿತರು ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.



