ಹೊಸದಿಗಂತ ಧಾರವಾಡ:
ಅಕ್ರಮವಾಗಿ ಜಾನುವಾರುಗಳ ಚರ್ಮ ಹಾಗೂ ಮಾಂಸವನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಭಜರಂಗದಳದ ಕಾರ್ಯಕರ್ತರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ಹಾರೋಬೆಳವಡಿ ಗ್ರಾಮದ ಬಳಿ ನಡೆದಿದೆ.
ನಗರದ ಕಸಾಯಿಖಾನೆಯಿಂದ ಆಂಧ್ರಪ್ರದೇಶ ನೋಂದಣಿಯ ಲಾರಿಯಲ್ಲಿ ಕೋಲ್ಕತ್ತಕ್ಕೆ ಜಾನುವಾರುಗಳ ಚರ್ಮವನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿಂದುಪರ ಸಂಘಟನೆಗಳಿಗೆ ಲಭಿಸಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಭಜರಂಗದಳದ ಕಾರ್ಯಕರ್ತರು, ಹಾರೋಬೆಳವಡಿ ಬಳಿ ಲಾರಿಯನ್ನು ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಲಾರಿಯಲ್ಲಿ ಅಪಾರ ಪ್ರಮಾಣದ ಚರ್ಮ ಮತ್ತು ಮಾಂಸ ಪತ್ತೆಯಾಗಿದೆ.
ನಗರದ ಕಸಾಯಿಖಾನೆಯಲ್ಲಿ ನಿಯಮಬಾಹಿರವಾಗಿ ಜಾನುವಾರುಗಳ ವಧೆ ನಡೆಯುತ್ತಿದೆ ಎಂದು ಸಂಘಟನೆಗಳು ಈ ಹಿಂದೆಯೇ ದೂರಿದ್ದವು. “ಕಸಾಯಿಖಾನೆ ಸುತ್ತ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಇಷ್ಟೊಂದು ಪ್ರಮಾಣದ ಚರ್ಮ ಲಾರಿಗೆ ತುಂಬಿದ್ದು ಹೇಗೆ? ಇದು ಅಧಿಕಾರಿಗಳ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ” ಎಂದು ಕಾರ್ಯಕರ್ತರು ಕಿಡಿಕಾರಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಜರಂಗದಳದ ಮುಖಂಡ ಸಿದ್ದು ಹಿರೇಮಠ ಆಗ್ರಹಿಸಿದ್ದಾರೆ.



