March 15, 2026
Sunday, March 15, 2026
spot_img

ಕೊಹ್ಲಿ ದಾಖಲೆ ಸರಿಗಟ್ಟಿದ ಸ್ಮೃತಿ: ಬಿಸಿಸಿಐ ಪ್ರಶಸ್ತಿ ಪಟ್ಟಿಯಲ್ಲಿ ಮಂಧಾನ-ಗಿಲ್ ದರ್ಬಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅದ್ಧೂರಿಯಾಗಿ ಆಯೋಜಿಸಿದೆ. ಕಳೆದ ಆವೃತ್ತಿಯ ಅಂತರರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ತಾರೆಯರನ್ನು ಈ ವೇದಿಕೆಯಲ್ಲಿ ಗೌರವಿಸಲಾಗುತ್ತಿದೆ.

ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಅವರು 2024-25ರ ಸಾಲಿನ ‘ಅತ್ಯುತ್ತಮ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟರ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕಳೆದ ಒಂದೇ ಋತುವಿನಲ್ಲಿ 36 ಪಂದ್ಯಗಳಿಂದ 7 ಶತಕಗಳ ಸಹಿತ ಭರ್ಜರಿ 1,800 ರನ್ ಗಳಿಸಿರುವ ಮಂಧಾನ, ಈ ಪ್ರಶಸ್ತಿಯನ್ನು ಸತತ ಎರಡನೇ ಬಾರಿ ಗೆದ್ದಿದ್ದಾರೆ.

ವಿಶೇಷವೆಂದರೆ, ಇದು ಸ್ಮೃತಿ ಅವರಿಗೆ ಸಿಗುತ್ತಿರುವ ಐದನೇ ‘ವರ್ಷದ ಆಟಗಾರ್ತಿ’ ಪ್ರಶಸ್ತಿಯಾಗಿದ್ದು, ಇದರೊಂದಿಗೆ ಅವರು ಪುರುಷರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ (5) ಈ ಗೌರವ ಪಡೆದಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪುರುಷರ ವಿಭಾಗದಲ್ಲಿ ಭಾರತದ ಹೊಸ ನಾಯಕ ಶುಭಮನ್ ಗಿಲ್ ಅವರು ವರ್ಷದ ಕ್ರಿಕೆಟಿಗ (ಪಾಲಿ ಉಮ್ರಿಗರ್ ಟ್ರೋಫಿ) ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗಿಲ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ವೈಯಕ್ತಿಕ ಸಾಧನೆಗಳ ಹೊರತಾಗಿ, ಕಳೆದ ಒಂದೂವರೆ ವರ್ಷಗಳಲ್ಲಿ ಐದು ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಭಾರತದ ಪುರುಷ ಮತ್ತು ಮಹಿಳಾ ತಂಡಗಳನ್ನು ಬಿಸಿಸಿಐ ವಿಶೇಷವಾಗಿ ಸನ್ಮಾನಿಸಲಿದೆ.

ಇದೇ ವೇಳೆ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿ ಮತ್ತು ಮಿಥಾಲಿ ರಾಜ್ ಅವರಿಗೆ ಅವರ ಸುದೀರ್ಘ ಸೇವೆಯನ್ನು ಪರಿಗಣಿಸಿ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !