Saturday, August 30, 2025

ಉತ್ತರಾಖಂಡದಲ್ಲಿ ಮೇಘಸ್ಫೋಟ! ಭೂಕುಸಿತದ ಭೀಕರ ತಾಂಡವ: 5 ಸಾವು, 11 ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದಲ್ಲಿ ನಿರಂತರ ಭಾರೀ ಮಳೆಯ ಪರಿಣಾಮ ಮೇಘಸ್ಫೋಟ ಮತ್ತು ಭೂಕುಸಿತಗಳು ಸಂಭವಿಸಿ ಹಲವು ಜಿಲ್ಲೆಗಳಲ್ಲಿ ಭೀಕರ ಹಾನಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, 11 ಮಂದಿ ನಾಪತ್ತೆಯಾಗಿದ್ದಾರೆ. ಮನೆಗಳು ಕುಸಿದು ಅವಶೇಷಗಳಡಿ ಜನರು ಸಿಲುಕಿರುವ ಘಟನೆಗಳು ಅಧಿಕಾರಿಗಳಿಗೆ ಗಂಭೀರ ಸವಾಲಾಗಿ ಪರಿಣಮಿಸಿವೆ.

ಬಾಗೇಶ್ವರ ಜಿಲ್ಲೆಯ ಕಪ್‌ಕೋಟ್ ಪ್ರದೇಶದ ಪೌಸಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 6 ಮನೆಗಳು ಭೂಕುಸಿತದಿಂದ ಹಾನಿಗೊಳಗಾಗಿವೆ. ಇದರಲ್ಲಿ ಇಬ್ಬರು ಮೃತಪಟ್ಟಿದ್ದು, ಮೂವರು ಕಾಣೆಯಾಗಿದ್ದಾರೆ. ಒಬ್ಬರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಚಮೋಲಿ ಜಿಲ್ಲೆಯ ಮೊಪಾಟಾ ಗ್ರಾಮದಲ್ಲೂ ಭೂಕುಸಿತ ಸಂಭವಿಸಿ ಮನೆ ಮತ್ತು ದನದ ಕೊಟ್ಟಿಗೆ ನೆಲಸಮವಾಗಿದೆ. ಇದರಿಂದ ದಂಪತಿ ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಾಯಗಳಾಗಿವೆ. ಇದೇ ರೀತಿ ರುದ್ರಪ್ರಯಾಗ ಜಿಲ್ಲೆಯ ಬಸುಕೆದಾರ್ ಪ್ರದೇಶದಲ್ಲಿ ಮಳೆ ಹಾಗೂ ಭೂಕುಸಿತದಿಂದ 6ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಾರೀ ಹಾನಿ ಉಂಟಾಗಿದೆ. ಇಲ್ಲಿ ಇಬ್ಬರು ಸಾವನ್ನಪ್ಪಿ 8 ಮಂದಿ ನಾಪತ್ತೆಯಾಗಿದ್ದಾರೆ. ಅಲ್ಲದೆ, ಡೆಹ್ರಾಡೂನ್‌ನ ಬಿಂದಾಲ್ ನದಿಯಲ್ಲಿ 10 ವರ್ಷದ ಬಾಲಕನ ಶವ ಪತ್ತೆಯಾಗಿದೆ.

ಅಪಾಯದ ಪರಿಸ್ಥಿತಿಯಿಂದಾಗಿ ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ರುದ್ರಪ್ರಯಾಗ ಜಿಲ್ಲೆಯ ಸಿರೋಬ್‌ಗಢ ಪ್ರದೇಶದಲ್ಲಿ ರಸ್ತೆ ಮುಚ್ಚಲಾಗಿದೆ. ಯಾತ್ರಿಕರು ಸುರಕ್ಷತೆಗಾಗಿ ಅಧಿಕಾರಿಗಳ ಸೂಚನೆ ಪಡೆದುಕೊಂಡ ಬಳಿಕವೇ ಪ್ರಯಾಣ ಮುಂದುವರಿಸಲು ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ