ಹೊಸದಿಗಂತ ಡಿಜಿಟಲ್ ಡೆಸ್ಕ್:
ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಮಾದರಿಯಲ್ಲಿ ಉತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಕೇವಲ ಒಂಬತ್ತು ದಿನಗಳು ಬಾಕಿ ಇರುವಂತೆಯೇ, ನಗರದ ಪ್ರಮುಖ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಹಬ್ಬದ ಕಳೆಯನ್ನು ಹೆಚ್ಚಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಜ್ಜಾಗಿದೆ.
ಕಳೆದ ವರ್ಷ ಸಂಪೂರ್ಣ ಉತ್ಸವಕ್ಕೆ 40 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿತ್ತು. ಆದರೆ ಈ ಬಾರಿ ಕೇವಲ ದೀಪಾಲಂಕಾರಕ್ಕಾಗಿಯೇ 39 ಲಕ್ಷ ರೂಪಾಯಿಗಳ ಬೃಹತ್ ಟೆಂಡರ್ ಕರೆಯಲಾಗಿದೆ.
ಹಂತ 1 (10.14 ಲಕ್ಷ): ಧರ್ಮರಾಯಸ್ವಾಮಿ ದೇವಾಲಯ, ಸಂಪಂಗಿ ಕೆರೆ ಮತ್ತು ಕರಗ ಸಾಗುವ ಮಾರ್ಗಗಳಲ್ಲಿ ಅಲಂಕಾರ.
ಹಂತ 2 (28.92 ಲಕ್ಷ): ಜಿಬಿಎ ಪ್ರಧಾನ ಕಚೇರಿ, ನಗರದ ಪ್ರಮುಖ ವೃತ್ತಗಳು ಮತ್ತು ಆಯ್ದ ಮುಖ್ಯ ರಸ್ತೆಗಳಿಗೆ ವಿದ್ಯುತ್ ದೀಪಗಳ ಸ್ಪರ್ಶ.
ಪ್ರಮುಖ ದಿನಾಂಕಗಳು:
ಮಾರ್ಚ್ 24: ಧರ್ಮರಾಯಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಅಧಿಕೃತ ಚಾಲನೆ.
ಮಾರ್ಚ್ 30: ಭಕ್ತಿಭಾವದ ‘ಹಸಿ ಕರಗ’ ಮಹೋತ್ಸವ.
ಏಪ್ರಿಲ್ 1: ವಿಶ್ವವಿಖ್ಯಾತ ‘ಬೆಂಗಳೂರು ಕರಗ ಶಕ್ತ್ಯೋತ್ಸವ’.
ಭಕ್ತಾದಿಗಳಿಗೆ ಕೇವಲ ಧಾರ್ಮಿಕ ವಿಧಿವಿಧಾನಗಳಲ್ಲದೆ, ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಬಾರಿಯ ಕರಗವನ್ನು ಸ್ಮರಣೀಯವಾಗಿಸಲು ಬಿಬಿಎಂಪಿ ಮತ್ತು ಪ್ರಾಧಿಕಾರ ಯೋಜನೆ ರೂಪಿಸಿವೆ.



