March 16, 2026
Monday, March 16, 2026
spot_img

ಹಿಟ್ ನಟನಿಗೆ ಫ್ಲಾಪ್ ಆದ ನಿರ್ಮಾಣದ ಹಾದಿ: ಕಹಿ ಸತ್ಯ ಬಿಚ್ಚಿಟ್ಟ ವಿಜಯ್ ಸೇತುಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಟಾರ್ ನಟನಾಗಿ ಬೆಳೆದ ಮೇಲೆ ಕೇವಲ ಹಣ ಮಾಡುವುದಷ್ಟೇ ಗುರಿಯಾಗಿಟ್ಟುಕೊಳ್ಳದೆ, ಹೊಸ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ಸಿನಿಮಾ ನಿರ್ಮಾಣಕ್ಕೆ ಇಳಿಯುವವರು ಕೆಲವರು ಮಾತ್ರ. ಅಂತಹವರ ಸಾಲಿನಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಪ್ರಮುಖರು. ಆದರೆ, ನಟನೆಯಲ್ಲಿ ಯಶಸ್ಸಿನ ಶಿಖರ ಏರಿರುವ ಅವರಿಗೆ ನಿರ್ಮಾಣದ ಹಾದಿ ಮಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.

ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಹಲವು ಪ್ರಯೋಗಾತ್ಮಕ ಚಿತ್ರಗಳಿಗೆ ಬಂಡವಾಳ ಹೂಡಿರುವ ಸೇತುಪತಿ, ಇತ್ತೀಚೆಗೆ ‘ಗಲಾಟಾ ಪ್ಲಸ್’ ಸಂದರ್ಶನದಲ್ಲಿ ತಮ್ಮ ನಿರ್ಮಾಣದ ಸೋಲುಗಳ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ.

ಸಾಮಾನ್ಯವಾಗಿ ಸಿನಿಮಾಗಳು ಸೋತಾಗ ನಿರ್ಮಾಪಕರು ಮೌನಕ್ಕೆ ಶರಣಾಗುತ್ತಾರೆ. ಆದರೆ ವಿಜಯ್ ಸೇತುಪತಿ ಹಾಗಲ್ಲ. ತಾವು ನಿರ್ಮಿಸಿದ ಚಿತ್ರಗಳಿಂದ ಆದ ನಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸಂಗುತೇವನ್ ಈ ಚಿತ್ರ ಅರ್ಧದಲ್ಲೇ ನಿಂತು ಹೋದ ಕಾರಣ ಸುಮಾರು 1.75 ಕೋಟಿ ರೂ. ನಷ್ಟವಾಯಿತು.

‘ಆರೆಂಜ್ ಮಿಠೈ’, ‘ಮೆರ್ಕು ದೊಡರ್ಚಿ ಮಲೈ’, ‘ಜಂಗ್’ ಮತ್ತು ‘ಮಹಾಬಾತ್’ ಚಿತ್ರಗಳು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದರೂ, ಬಾಕ್ಸ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ ಹಣವನ್ನೂ ಮರಳಿ ತರಲಿಲ್ಲ.

ಸಿನಿಮಾಗಳು ಆರ್ಥಿಕವಾಗಿ ಕೈಕೊಟ್ಟಿದ್ದರೂ, ಸೇತುಪತಿ ಅವರಿಗೆ ಆ ಚಿತ್ರಗಳ ಮೇಲೆ ಬೇಸರವಿಲ್ಲ. “ಬಾಕ್ಸ್ ಆಫೀಸ್‌ನಲ್ಲಿ ಅವು ಸೋತಿರಬಹುದು, ಆದರೆ ಆ ಸಿನಿಮಾಗಳು ನನಗೆ ಎಂದಿಗೂ ಪ್ರಿಯ. ಆ ಕಥೆಗಳ ಮೇಲಿನ ಪ್ರೀತಿಯಿಂದಲೇ ನಾನು ನಿರ್ಮಾಣ ಮಾಡಿದ್ದೆ” ಎಂದು ಹೇಳುವ ಮೂಲಕ ತಮ್ಮ ಸಿನಿಮಾ ಪ್ರೇಮವನ್ನು ಮೆರೆದಿದ್ದಾರೆ.

ಪ್ರಸ್ತುತ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಮ್ಮ ವಿಶಿಷ್ಟ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !