ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ರಾಷ್ಟ್ರೀಯ ಪ್ರಾಣಿಸಂಗ್ರಹಾಲಯದಲ್ಲಿ (Delhi Zoo) ಬರ್ಡ್ ಫ್ಲೂ H5N1 ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹಕ್ಕಿಗಳ ಆರೋಗ್ಯ ಪರೀಕ್ಷೆಯ ವೇಳೆ ಎರಡು ಕೊಕ್ಕರೆಗಳಲ್ಲಿ ಸೋಂಕು ದೃಢಪಟ್ಟಿದ್ದು, ನಂತರ ಅವು ಮೃತಪಟ್ಟಿವೆ. ಸೋಂಕು ಇನ್ನಷ್ಟು ವ್ಯಾಪಿಸದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಪ್ರವೇಶವನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ತುರ್ತು ಸಭೆ ನಡೆಸಿ ಸೋಂಕಿನ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಮೃಗಾಲಯ ಆವರಣದಲ್ಲಿ ತೀವ್ರ ಸ್ಯಾನಿಟೈಜೇಶನ್ ಕಾರ್ಯ ನಡೆಯುತ್ತಿದೆ. ಎಲ್ಲಾ ಹಕ್ಕಿಗಳು ಹಾಗೂ ಪ್ರಾಣಿಗಳ ಆರೋಗ್ಯ ಸ್ಥಿತಿಯನ್ನು ನಿಗಾ ವಹಿಸಲಾಗುತ್ತಿದ್ದು, ಸೋಂಕಿತ ಹಕ್ಕಿಗಳ ಸಂಪರ್ಕದಲ್ಲಿದ್ದ ಇತರ ಹಕ್ಕಿಗಳ ಮೇಲೂ ವಿಶೇಷ ಗಮನ ಹರಿಸಲಾಗುತ್ತಿದೆ.
ಸಾರ್ವಜನಿಕರಲ್ಲಿ ಆತಂಕ ಉಂಟಾದರೂ, ಅಧಿಕಾರಿಗಳು ಜನತೆಗೆ ಅನಗತ್ಯ ಗಾಬರಿ ಬೇಡವೆಂದು ಮನವಿ ಮಾಡಿದ್ದಾರೆ. ಸೋಂಕಿನ ಮೂಲ ಪತ್ತೆ ಹಚ್ಚಲು ತಜ್ಞರ ತಂಡ ಕಾರ್ಯ ಆರಂಭಿಸಿದ್ದು, ಕೇಂದ್ರ ಆರೋಗ್ಯ ಇಲಾಖೆ, ದೆಹಲಿ ಸರ್ಕಾರ ಮತ್ತು ಪಶುವೈದ್ಯಕೀಯ ಇಲಾಖೆಗಳು ಪರಸ್ಪರ ಸಂಯೋಜನೆ ಮಾಡಿಕೊಂಡು ನಿಗಾ ಇರಿಸುತ್ತಿವೆ.
ಇದಕ್ಕೂ ಮುನ್ನ 2016 ಮತ್ತು 2021 ರಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಪತ್ತೆಯಾದಾಗ ದೆಹಲಿ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಇದೇ ರೀತಿಯ ಕ್ರಮವನ್ನು ಈಗ ಮತ್ತೆ ಅನುಸರಿಸಲಾಗಿದೆ.