ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು-ಕಾಶ್ಮೀರದ ರಾಂಬನ್ ಮತ್ತು ರಿಯಾಸಿ ಜಿಲ್ಲೆಗಳಲ್ಲಿನ ರಾಜ್‌ಗಢ ಮತ್ತು ಮಹೋರ್ ಪ್ರದೇಶಗಳಲ್ಲಿ ಶುಕ್ರವಾರ ಮಧ್ಯರಾತ್ರಿ ಎರಡು ಬಾರಿ ಮೇಘಸ್ಫೋಟ ಸಂಭವಿಸಿದ್ದು, ಒಂದೇ ಕುಟುಂಬದ ಏಳು ಮಂದಿ ಸೇರಿದಂತೆ ಕನಿಷ್ಠ 11 ಜನರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಕಾಣೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಮೊದಲ ಘಟನೆ ರಾಂಬನ್ ಜಿಲ್ಲೆಯ ರಾಜ್‌ಗಢದಲ್ಲಿ ರಾತ್ರಿ 12:30 ಕ್ಕೆ ಸಂಭವಿಸಿದೆ. ಈ ದುರಂತದಲ್ಲಿ ಎರಡು ಮನೆಗಳು ಮತ್ತು ಒಂದು ಶಾಲಾ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಮೂವರು ಸಾವನ್ನಪ್ಪಿದ್ದು, ಒಬ್ಬರನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಇನ್ನೊಂದು ಘಟನೆ ರಿಯಾಸಿ ಜಿಲ್ಲೆಯ ಮಹೋರ್ ತಾಲೂಕಿನ ಬದ್ದರ್ ಗ್ರಾಮದಲ್ಲಿ ನಡೆದಿದೆ. ಇಲ್ಲಿ ಒಂದೇ ಕುಟುಂಬದ ಏಳು ಮಂದಿ ಭಾರಿ ಮಳೆ ಹಾಗೂ ಮೇಘಸ್ಫೋಟದಿಂದ ಉಂಟಾದ ಭೂಕುಸಿತದಲ್ಲಿ ಮಣ್ಣಿನ ಮನೆ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ. ಮೃತರಲ್ಲಿ ನಜೀರ್ ಅಹ್ಮದ್, ವಜೀರಾ ಬೇಗಂ, ಬಿಲಾಲ್ ಅಹ್ಮದ್, ಮೊಹಮ್ಮದ್ ಮುಸ್ತಫಾ, ಮೊಹಮ್ಮದ್ ಆದಿಲ್, ಮೊಹಮ್ಮದ್ ಮುಬಾರಕ್ ಮತ್ತು ಮೊಹಮ್ಮದ್ ವಾಸಿಂ ಗುರುತಿಸಲ್ಪಟ್ಟಿದ್ದಾರೆ.
ಇದರ ನಡುವೆಯೇ ಉತ್ತರಾಖಂಡದಲ್ಲಿಯೂ ಮಳೆಯ ಅಬ್ಬರ ಮುಂದುವರಿದಿದೆ. ಚಮೋಲಿ ಜಿಲ್ಲೆಯಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಐದು ಕಡೆ ಸಂಚಾರ ಸ್ಥಗಿತಗೊಂಡಿದೆ. ಜೋಶಿಮಠ ಮತ್ತು ಅನಿಮಮಠ ಬಳಿ ಪರ್ವತ ಕುಸಿತ ಸಂಭವಿಸಿ ರಸ್ತೆಗೆ ಅವಶೇಷಗಳು ಬಿದ್ದಿವೆ. ರಾಜ್ಯದಲ್ಲಿ ನಡೆದ ಬೇರೆ ಬೇರೆ ಘಟನೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 11 ಮಂದಿ ನಾಪತ್ತೆಯಾಗಿದ್ದಾರೆ.