ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್‌ನ ಸೂರತ್‌ನಲ್ಲಿ ನಡೆದ ಎಟಿಎಂ ದೋಷ ಪ್ರಕರಣ 9 ವರ್ಷಗಳ ಬಳಿಕ ದೊಡ್ಡ ತೀರ್ಪಿನ ಮೂಲಕ ಅಂತ್ಯ ಕಂಡಿದ್ದು, ಗ್ರಾಹಕನಿಗೆ ನ್ಯಾಯ ಸಿಕ್ಕಿದೆ. ₹10,000 ಹಣ ತೆಗೆಯಲು ಯತ್ನಿಸಿದ ವ್ಯಕ್ತಿಗೆ ಹಣ ಸಿಗದಿದ್ದರೂ, ನಂತರದ ಹೋರಾಟದ ಫಲವಾಗಿ ಈಗ ಲಕ್ಷಾಂತರ ಪರಿಹಾರ ದೊರಕಿದೆ.
ಈ ಘಟನೆ 2017 ಫೆಬ್ರವರಿ 18ರಂದು ನಡೆದಿದೆ. ಗ್ರಾಹಕ ಎಟಿಎಂನಲ್ಲಿ ಹಣ ತೆಗೆಯಲು ಯತ್ನಿಸಿದಾಗ ಯಂತ್ರ ಹಣ ನೀಡಲಿಲ್ಲ, ರಶೀದಿಯೂ ಬರಲಿಲ್ಲ. ಆದರೆ ಖಾತೆಯಿಂದ ₹10,000 ಕಡಿತವಾಗಿರುವ ಸಂದೇಶ ಬಂದಿದೆ. ಇದರಿಂದ ಆತಂಕಗೊಂಡ ಅವರು ಬ್ಯಾಂಕ್‌ಗೆ ದೂರು ಸಲ್ಲಿಸಿದರು. ಅನೇಕ ಬಾರಿ ಇಮೇಲ್ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಸ್ಪಷ್ಟ ಉತ್ತರ ಸಿಗಲಿಲ್ಲ.
ಇದನ್ನೂ ಓದಿ:
ಈ ಹಿನ್ನೆಲೆಯಲ್ಲಿ ಗ್ರಾಹಕ ಕೊನೆಗೆ ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ವಿಚಾರಣೆಯ ವೇಳೆ ಬ್ಯಾಂಕ್, ಎಟಿಎಂ ಬೇರೆ ಬ್ಯಾಂಕ್‌ಗೆ ಸೇರಿದದ್ದರಿಂದ ತಮಗೆ ಜವಾಬ್ದಾರಿ ಇಲ್ಲ ಎಂದು ವಾದಿಸಿತು. ಆದರೆ ಆಯೋಗ ಈ ವಾದವನ್ನು ತಳ್ಳಿ ಹಾಕಿ, ಗ್ರಾಹಕನಿಗೆ ನ್ಯಾಯ ಒದಗಿಸಿತು.
ಕೋರ್ಟ್ ತೀರ್ಪಿನ ಪ್ರಕಾರ, ಮೂಲ ₹10,000 ಮೊತ್ತಕ್ಕೆ 9% ಬಡ್ಡಿ ನೀಡಬೇಕು. ಜೊತೆಗೆ ವಿಳಂಬದ 3,288 ದಿನಗಳಿಗೆ ದಿನಕ್ಕೆ ₹100ರಂತೆ ₹3,28,800 ಪರಿಹಾರ ಪಾವತಿಸಲು ಆದೇಶಿಸಿದೆ. ಮಾನಸಿಕ ಕಿರುಕುಳಕ್ಕೆ ₹3,000 ಮತ್ತು ಕಾನೂನು ವೆಚ್ಚಕ್ಕೆ ₹2,000 ನೀಡುವಂತೆ ಸೂಚಿಸಲಾಗಿದೆ.
ಈ ತೀರ್ಪು ಗ್ರಾಹಕರ ಹಕ್ಕುಗಳ ರಕ್ಷಣೆಗೆ ಮಹತ್ವದ ಉದಾಹರಣೆಯಾಗಿದೆ.



