ಹೊಸ ದಿಗಂತ ವರದಿ ತಿಪಟೂರು :
ತಿಪಟೂರು ನಗರದಲ್ಲಿ ಭಿನ್ನಕೋಮಿನ ನಡುವೆ ಎರಡು ಪ್ರತ್ಯೇಕ ಘಟನೆಗಳು ನಡೆದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಹಿಂದೂಪರ ಕಾರ್ಯಕರ್ತರು ಮತ್ತು ಬಿಜೆಪಿ ಮುಖಂಡರು ಪ್ರತಿಭನಟನೆ ನಡೆಸಿದ್ದಾರೆ.
ರಂಜಾನ್ ಆಚರಣೆಯ ದಿನದಂದೆ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು, ನಗರದ ಮಾವಿನತೋಪಿನಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಿರುವ ಬಗ್ಗೆ ಹಾಗೂ ಜಾನುವಾರು ಅಕ್ರಮ ಸಾಗಣೆ ಮಾಡುತ್ತಿದ್ದ ಪ್ರಕರಣ ಸಂಬಧಿಸಿದ ಹಿನ್ನಲೆಯಲ್ಲಿ ಮಾ.24 ಮಂಗಳವಾರ ತಿಪಟೂರು ಬಂದ್‍ಗೆ ಕರೆ ನೀಡಲಾಗಿದೆ.
ಮಾವಿನತೋಪಿನಲ್ಲಿ ಮಸೀದಿ ನಿರ್ಮಾಣ ವಿವಾದ:
ತಿಪಟೂರು ನಗರಸಭೆಯ ವಾರ್ಡ್ ನಂ. 5ರ ಮಾವಿನತೋಪಿನ ಸರ್ವೆ ನಂ. 366ರಲ್ಲಿ 2004ರಲ್ಲಿ ಅಂಜುಮನ್ ಶಾಲೆಗೆ ನೀಡಲಾಗಿದ್ದ ಸ್ಥಳದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶುಕ್ರವಾರ ರಾತ್ರಿ ಈ ವಿಚಾರವಾಗಿ ಎರಡು ಸಮುದಾಯಗಳ ನಡುವೆ ವಾಗ್ವಾದ ನಡೆದು ಉದ್ವಿಗ್ನತೆ ಉಂಟಾಯಿತು.
ಶನಿವಾರ ಬೆಳಿಗ್ಗೆ ಕೆಲವು ಸಂಘಟನೆಗಳ ಕಾರ್ಯಕರ್ತರು ಅಕ್ರಮ ಮಸೀದಿ ನಿರ್ಮಾಣ ನಡೆಯಬಾರದು ಎಂದು ಪಟ್ಟು ಹಿಡಿದ ಹಿನ್ನೆಲೆ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ನಗರ ಪೆÇಲೀಸ್ ಠಾಣೆಯ ಅಧಿಕಾರಿ ರವಿಕುಮಾರ್ ನೇತೃತ್ವದಲ್ಲಿ ಸ್ಥಳಕ್ಕೆ ಪೆÇಲೀಸರು ತೆರಳಿ ಶಾಂತಿ ಕಾಪಾಡಿದರು.
ಜಾನುವಾರು ಸಾಗಣೆ ಪ್ರಕರಣ: ಬಂದ್ ಕರೆ
ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದರೆಂದು ಆರೋಪಿಸಿ ಒಂದು ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಡೆದು ತಪಾಸಣೆ ನಡೆಸಿದ ವೇಳೆ ಬಜರಂಗದಳದ ಕಾರ್ಯಕರ್ತರ ಮೇಲೆ ಭಿನ್ನಕೋಮಿನ ಗುಂಪು ಧಾವಿಸಿ ಹಲ್ಲೆ ನಡೆಸಿದ ಪರಿಣಾಮ ಕೆಲವರು ಗಾಯಗೊಂಡಿದ್ದು ಗಾಯಾಳುಗಳನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಘಟನೆಯಲ್ಲಿ ಬಜರಂಗದಳದ ಕಾರ್ಯಕರ್ತರಾದ ಗೌತಮ್, ಆನಂದ್, ಶ್ರೇಯಸ್, ಸಚಿನ್ ಹಾಗೂ ಪ್ರಜ್ವಲ್ ಗಾಯಗೊಂಡಿದ್ದು, ಹಾಸನ ಜಿಲ್ಲೆಯ ಚನ್ನಾಪುರ ಗ್ರಾಮದದಿಂದ ಹಸುವನ್ನು ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಾಹನವನ್ನು ತಪಾಸಣೆ ಮಾಡಲು ಮುಂದಾದಾಗ ಘಟನೆ ನಡೆದಿದೆ ಎನ್ನಲಾಗಿದ್ದು ಘಟನೆಯು ತಿಪಟೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ಘಟನೆಯ ಮಾಹಿತಿ ತಿಳಿದ ಬಳಿಕ ನೂರಾರು ಕಾರ್ಯಕರ್ತರು ಆಸ್ಪತ್ರೆ ಬಳಿ ಸೇರಿ ಅಕ್ರೋಶ ವ್ಯಕ್ತಪಡಿಸಿದ ಬಳಿಕ ನಗರದ ಡಿವೈಎಸ್‍ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಇದೇ ವೇಳೆ ಮಾರ್ಚ್ 24 (ಮಂಗಳವಾರ) ತಿಪಟೂರು ಬಂದ್‍ಗೆ ಕರೆ ನೀಡಲಾಗಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಗಂಗರಾಜು, ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಬಾಳೇಕಾಯಿ ನಟರಾಜು ಮಾತನಾಡಿ, ಗೋಹತ್ಯೆನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ತಿಪಟೂರಿನಲ್ಲಿ ಅಕ್ರಮ ಗೋಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿದರು. ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದರೆ ಕಾರ್ಯಕರ್ತರು ತಡೆಯಲು ಮುಂದಾಗಬೇಕಾಗಿರಲಿಲ್ಲ ಎಂದು ಹೇಳಿದರು. ಗೋಹತ್ಯೆ ತಡೆಯಲು ಹೋದವರ ಮೇಲೆಯೇ ಪ್ರಕರಣ ದಾಖಲಾಗುತ್ತಿರುವುದು ಖಂಡನೀಯ ಎಂದರು.
ಮಾಜಿ ನಗರಸಭಾ ಸದಸ್ಯೆ ಮಹಾಲಕ್ಷ್ಮಿ ಮಾತನಾಡಿ, ಮಾವಿನತೋಪು ಪ್ರದೇಶದಲ್ಲಿ ಮಧ್ಯರಾತ್ರಿ ಹೊರಗಡೆಯಿಂದ ಬಂದಿರುವ ಶಂಕಿತ ವ್ಯಕ್ತಿಗಳು ಸಂಚರಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಂತವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಳ್ಳಿಗಾರ್ ಸಂಘಟನೆಯ ಮಡೆನೂರು ವಿನಯ್ ಕುಮಾರ್, ವಿಶ್ವದೀಪು, ಮಂಜುನಾಥ್, ಅಶ್ವಿನ್‍ಸಿಂಗ್, ಪ್ರಜ್ವಲ್, ನಾಗೇಶ್ ಸೇರಿದಂತೆ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಗದೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಎರಡು ಘಟನೆಗಳ ಹಿನ್ನೆಲೆ ನಗರದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.



