March 25, 2026
Wednesday, March 25, 2026
spot_img

ಅಜಿತ್ ಪವಾರ್ ವಿಮಾನ ಅಪಘಾತ ಪ್ರಕರಣ: ಬೆಂಗಳೂರಿನಲ್ಲಿ ದಾಖಲಾಗಿದ್ದ ‘ಶೂನ್ಯ ಎಫ್‌ಐಆರ್’ ಮಹಾರಾಷ್ಟ್ರಕ್ಕೆ ವರ್ಗಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:


ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ವಿಮಾನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ದಾಖಲಾಗಿದ್ದ ‘ಶೂನ್ಯ ಎಫ್‌ಐಆರ್’ ಅನ್ನು ರಾಜ್ಯ ಪೊಲೀಸರು ಇದೀಗ ಅಧಿಕೃತವಾಗಿ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ವರ್ಗಾಯಿಸಿದ್ದಾರೆ.


ಪ್ರಕರಣದ ಸಂಪೂರ್ಣ ದಾಖಲೆಗಳನ್ನು ವರ್ಗಾವಣೆಯ ಭಾಗವಾಗಿ ಕಳುಹಿಸಿಕೊಡಲಾಗಿದ್ದು, ಮುಂದಿನ ತನಿಖೆಯನ್ನು ಮಹಾರಾಷ್ಟ್ರ ಪೊಲೀಸರು ಕೈಗೆತ್ತಿಕೊಳ್ಳಲಿದ್ದಾರೆ. ಈ ಸಂಬಂಧ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿ. ಹರಿಶೇಖರನ್ ಅವರು ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಪ್ರಕರಣವನ್ನು ನಿರ್ದಿಷ್ಟವಾಗಿ ಬಾರಾಮತಿ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸುವಂತೆ ಕೋರಿದ್ದಾರೆ.


ಈ ಮಹತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 23 ರಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಜಿತ್ ಪವಾರ್ ಅವರ ಸೋದರಳಿಯ ಹಾಗೂ ಮಹಾರಾಷ್ಟ್ರದ ಶಾಸಕ ರೋಹಿತ್ ರಾಜೇಂದ್ರ ಪವಾರ್ ಅವರು ದೂರು ದಾಖಲಿಸಿದ್ದರು. ಘಟನೆ ನಡೆದ ಸ್ಥಳ ಬೆಂಗಳೂರು ವ್ಯಾಪ್ತಿಗೆ ಬರದಿದ್ದರೂ, ತುರ್ತು ಸಂದರ್ಭದಲ್ಲಿ ದಾಖಲಿಸಿಕೊಳ್ಳಲಾದ ಈ ಶೂನ್ಯ ಎಫ್‌ಐಆರ್ ಅನ್ನು ಈಗ ಕಾನೂನು ಪ್ರಕ್ರಿಯೆಯ ಪ್ರಕಾರ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.


ತನಿಖೆಯ ವರದಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳು ಮಹಾರಾಷ್ಟ್ರದಲ್ಲಿ ಜರುಗಲಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !