ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಷ್ಕೃತ ಉಡಾನ್ ಯೋಜನೆಯಡಿ ಮುಂದಿನ 10 ವರ್ಷಗಳಲ್ಲಿ 120 ಹೊಸ ಪ್ರಾದೇಶಿಕ ಮಾರ್ಗಗಳನ್ನು ಸಂಪರ್ಕಿಸುವ ಮತ್ತು ವಾಯುಯಾನ ಮೂಲಸೌಕರ್ಯಗಳನ್ನು ಬಲಪಡಿಸಲು ಕೇಂದ್ರ ಸಂಪುಟ ಸಭೆ 28 ಸಾವಿರದ 848 ಕೋಟಿ ರೂಪಾಯಿ ಯೋಜನೆಗೆ ಅನುಮೋದನೆ ನೀಡಿದೆ.
ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಸೇವೆಯಲ್ಲಿಲ್ಲದ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು. ಇದರಿಂದ 2ನೇ ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಆರ್ಥಿಕ ಬೆಳವಣಿಗೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಲಿದೆ. ಜತೆಗೆ ಜನಸಾಮಾನ್ಯರಿಗೆ ಕೈಗೆಟುಕುವ ವಿಮಾನ ಪ್ರಯಾಣ ಲಭ್ಯವಾಗಲಿದೆ ಎಂದರು.
ವಲಸೆ ಮತ್ತು ವಲಸೆ ಸೇವೆಗಳನ್ನು ಆಧುನೀಕರಿಸುವ ಮೂಲಕ ರಾಷ್ಟ್ರೀಯ ಭದ್ರತೆಯ ಗುರಿಯನ್ನು ಹೊಂದಿರುವ ವಲಸೆ ವೀಸಾ ಮತ್ತು ವಿದೇಶಿಯರ ನೋಂದಣಿ ಮತ್ತು ಟ್ರಾಕಿಂಗ್ – I V F R T 3.0 ಯೋಜನೆಗೆ ಸಂಪುಟ ಅನುಮೋದನೆ ನೀಡಿದ್ದು, 5 ವರ್ಷಗಳ ಈ ಯೋಜನೆಗೆ 1 ಸಾವಿರದ 800 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
I V F R T 3.0 ವೇದಿಕೆಯು ಭಾರತದಲ್ಲಿ ವಲಸೆ, ವೀಸಾ ವಿತರಣೆ, ವಿದೇಶಿಯರ ನೋಂದಣಿಗೆ ಸಂಬಂಧಿಸಿದ ಕಾರ್ಯಗಳನ್ನು ಪರಸ್ಪರ ಜೋಡಿಸಲು ಪ್ರಯತ್ನಿಸುತ್ತದೆ. ಸುರಕ್ಷಿತ ಮತ್ತು ಸಮಗ್ರ ಸೇವಾ ವಿತರಣಾ ಚೌಕಟ್ಟಿನೊಳಗೆ ವಲಸೆ ಮತ್ತು ವೀಸಾ ಸೇವೆಗಳನ್ನು ಆಧುನೀಕರಿಸುವುದು, ನವೀಕರಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.



