March 30, 2026
Monday, March 30, 2026
spot_img

ಮಧ್ಯಪ್ರಾಚ್ಯ ಬಿಕ್ಕಟ್ಟಿನಲ್ಲೂ ಯೂರಿಯಾ ಪೂರೈಕೆಯಲ್ಲಿ ವ್ಯತ್ಯಯ ಇಲ್ಲ: ರೈತರಿಗೆ ಕೇಂದ್ರ ಸರಕಾರದ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿನ ಸಂಘರ್ಷ ತಾರಕ್ಕೇರುತ್ತಿದ್ದು, ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇದರ ನಡುವೆ ಜಾಗತಿಕವಾಗಿ ಇಂಧನ ಪೂರೈಕೆಗೆ ಹೊಡೆತ ಬೀಳುತ್ತಿದೆ . ಆದರೆ ಭಾರತದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅಭಾವವಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅದರಲ್ಲೂ ಗಲ್ಫ್ ರಾಷ್ಟ್ರಗಳಿಂದ ಯೂರಿಯಾ ಪೂರೈಕೆಯಲ್ಲಿ ಅಡೆತಡೆ ಉಂಟಾಗಿದ್ದು ಇದರಿಂದ ರೈತರು ಕಂಗಾಲಾಗಿದ್ದು, ಮುಂದಿನ ದಿನಗಳಲ್ಲಿ ರಸಗೊಬ್ಬರದ ಅಭಾವ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಬಂದರು, ಹಡಗು, ಜಲಮಾರ್ಗ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಅಧಿಕಾರಿಗಳು, ದೇಶದಲ್ಲಿ ಪ್ರಸುತ್ತ ಸಾಕಷ್ಟು ಪ್ರಮಾಣದಲ್ಲಿ ಯೂರಿಯಾ ಸಂಗ್ರಹವಿದ್ದು, ರಸಗೊಬ್ಬರಗಳ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.

ಯಾವ ರೀತಿ ನಾವು ತೈಲಗಳಿಗೆ ಬೇರೆ ದೇಶಗಳನ್ನು ಅವಲಂಬನೆಯಾಗುತ್ತಿದ್ದೇವೆ. ಅದೇ ರೀತಿ ದೇಶಕ್ಕೆ ರಸಗೊಬ್ಬರ ಅಧಿಕ ಪ್ರಮಾಣದಲ್ಲಿ ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದು, ಶೇ. 20-30ರಷ್ಟು ಯೂರಿಯ, ಶೇ. 30ರಷ್ಟು ಡಿಎಪಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಸದ್ಯ ರಸಗೊಬ್ಬರ ದಾಸ್ತಾನು ಸಾಕಷ್ಟಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ನಮ್ಮಲ್ಲಿ 147 ಲಕ್ಷ ಟನ್ ಯೂರಿಯಾ ಇದ್ದರೆ, ಈ ಬಾರಿ 180 ಲಕ್ಷ ಟನ್​ಗಳಷ್ಟಿದೆ. ಅದೇ ರೀತಿ ಇನ್ನೂ ಸದ್ಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಾಯ ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ ಮುಂದಿನ ಮುಂಗಾರು ಬೆಳೆ ಸಮಯಕ್ಕೆ ಸರಿಯಾಗಿ ಯೂರಿಯಾ ದಾಸ್ತಾನು ಆಗಲಿದೆ ಎಂದು ತಿಳಿಸಿದರು.

ಯೂರಿಯಾ ಉತ್ಪಾದನೆಗೆ ಬಳಸುವ ಎಲ್​ಎನ್​ಜಿ ಯನ್ನು ಶೇ. 50ರಷ್ಟು ಗಲ್ಫ್​ನಿಂದ ಪೂರೈಕೆಯಾಗುತ್ತಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಉತ್ಪಾದನೆಯಾಗುತ್ತಿದ್ದು, ದಿನಕ್ಕೆ 12,000-15,000 ಟನ್​ಗಳಷ್ಟು ಹೆಚ್ಚಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈಗಾಗಲೇ 13.07 ಲಕ್ಷ ಟನ್​ಗಳಷ್ಟು ಯೂರಿಯಾ ಖರೀದಿಗೆ ಜಾಗತಿಕ ಟೆಂಡರ್ ಕರೆಯಲಾಗಿದ್ದು, ರಷ್ಯಾ, ಓಮನ್, ಮೊರಾಕ್ಕೋ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಇಂಡೋನೇಷ್ಯಾ, ಮಲೇಷ್ಯಾ, ಜೋರ್ಡಾನ್, ಕೆನಡಾ, ಈಜಿಪ್ಟ್ ಮೊದಲಾದ ದೇಶಗಳಿಂದ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !