September 16, 2026
Wednesday, September 16, 2026
spot_img

ರೂಲ್ಸ್ ಬ್ರೇಕ್ ಮಾಡಿದ್ರೆ ಕ್ಲಾಸ್ ತಗೊಳ್ದೆ ಬಿಡಲ್ಲ ಅಂಪೈರ್: ಮೈದಾನದಲ್ಲೇ ತೆವಾಟಿಯಾ ಬ್ಯಾಟ್‌ ಸೀಜ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಅಂದ್ರೆ ಬರೀ ಸಿಕ್ಸರ್, ಬೌಂಡರಿಗಳ ಅಬ್ಬರವಷ್ಟೇ ಅಲ್ಲ, ವಿವಾದಗಳಿಗೂ ಇಲ್ಲಿ ಬರವಿಲ್ಲ. ನೋಬಾಲ್, ವೈಡ್ ಕಿರಿಕ್ ನಡುವೆ ಈಗ ‘ಬ್ಯಾಟ್ ಗಾತ್ರ’ಕ್ಕೆ ಸಂಬಂಧಿಸಿದ ಹೊಸ ಹೈಡ್ರಾಮಾವೊಂದು ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ ನಡೆದಿದೆ.

ಗುಜರಾತ್ ತಂಡದ ಫಿನಿಶರ್ ರಾಹುಲ್ ತೆವಾಟಿಯಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಈ ಘಟನೆ ನಡೆದಿದೆ. ತೆವಾಟಿಯಾ ಕ್ರೀಸ್‌ಗೆ ಬರುತ್ತಿದ್ದಂತೆ ತಡೆದ ಅಂಪೈರ್‌ಗಳು, ಅವರ ಬ್ಯಾಟ್ ಅನ್ನು ‘ಬ್ಯಾಟ್ ಗೇಜ್’ ಸಾಧನದ ಮೂಲಕ ಪರೀಕ್ಷಿಸಿದರು. ಈ ವೇಳೆ ತೆವಾಟಿಯಾ ತಂದಿದ್ದ ಬ್ಯಾಟ್ ನಿಗದಿತ ಐಪಿಎಲ್ ನಿಯಮಗಳಿಗಿಂತ ದಪ್ಪವಾಗಿರುವುದು ಕಂಡುಬಂದಿದೆ. ಕೂಡಲೇ ಅಂಪೈರ್‌ಗಳು ಆ ಬ್ಯಾಟ್ ಬಳಸದಂತೆ ಸೂಚಿಸಿ, ಬದಲಾಯಿಸಲು ಆದೇಶಿಸಿದರು. ತೆವಾಟಿಯಾ ಮರಳಿ ಹೊಸ ಬ್ಯಾಟ್ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು.

ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ ನಿಯಮಗಳ ಪ್ರಕಾರ ಬ್ಯಾಟ್ ಗಾತ್ರ ಹೀಗಿರಬೇಕು:

ಅಂಚುಗಳು: 4 ಸೆಂ.ಮೀ (1.56 ಇಂಚು) ಗಿಂತ ಹೆಚ್ಚಿರಬಾರದು.

ಒಟ್ಟಾರೆ ಆಳ (Depth): ಗರಿಷ್ಠ 6.7 ಸೆಂ.ಮೀ (2.64 ಇಂಚು).

ಅಗಲ: 10.8 ಸೆಂ.ಮೀ (4.25 ಇಂಚು) ಮೀರುವಂತಿಲ್ಲ.

2018ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಜಾರಿಗೆ ತಂದ ಈ ನಿಯಮವನ್ನು ಈಗ ಐಪಿಎಲ್‌ನಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಬ್ಯಾಟ್ ದಪ್ಪವಾಗಿದ್ದರೆ ಚೆಂಡು ಅಂಚಿಗೆ ತಗುಲಿದರೂ ಸಿಕ್ಸರ್ ಹೋಗುವ ಸಾಧ್ಯತೆ ಇರುವುದರಿಂದ, ಬೌಲರ್‌ಗಳಿಗೆ ಅನ್ಯಾಯವಾಗಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !