ಹೊಸದಿಗಂತ ಬೆಳಗಾವಿ:
ಜಿಲ್ಲೆಯಲ್ಲಿ ಬೀದಿನಾಯಿಗಳ ಕಾಟ ಸಾರ್ವಜನಿಕರ ನಿದ್ದೆಗೆಡಿಸಿದೆ. ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿಯಲ್ಲಿ ನಾಯಿಗಳ ಹಿಂಡು ಯುವಕನ ಮೇಲೆ ನಡೆಸಿದ ಭೀಕರ ದಾಳಿ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಹುಲ್ಲೋಳಿ ಹಟ್ಟಿ ಗ್ರಾಮದ ಬಸವರಾಜ ಹೆಬ್ಬಾಳೆ (30) ಎಂಬ ಯುವಕನ ಮೇಲೆ ಏಕಾಏಕಿ 8 ರಿಂದ 10 ನಾಯಿಗಳ ಹಿಂಡು ಮುಗಿಬಿದ್ದಿದೆ. ಜೀವ ಉಳಿಸಿಕೊಳ್ಳಲು ಯುವಕ ಓಡಿದರೂ ಬಿಡದ ನಾಯಿಗಳು, ಆತನನ್ನು ಬೆನ್ನಟ್ಟಿ ದೇಹದಾದ್ಯಂತ ಮನಬಂದಂತೆ ಕಚ್ಚಿ ಗಾಯಗೊಳಿಸಿವೆ. ಪ್ರಸ್ತುತ ತೀವ್ರ ರಕ್ತಸ್ರಾವದಿಂದಾಗಿ ಬಸವರಾಜ ಕೋಮಾ ಸ್ಥಿತಿ ತಲುಪಿದ್ದು, ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಕೇವಲ ಇದೊಂದೇ ಘಟನೆಯಲ್ಲ, ಬೆಳಗಾವಿ ನಗರದ ತಾವರಪ್ಪ (48) ಎಂಬುವವರ ಮೇಲೂ ನಾಯಿಗಳು ದಾಳಿ ಮಾಡಿದ್ದು, ಅವರು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹದಿನೈದು ದಿನಗಳ ಹಿಂದಷ್ಟೇ ಇದೇ ಗ್ರಾಮದಲ್ಲಿ 4 ವರ್ಷದ ಹಸುಗೂಸಿನ ಮೇಲೂ ನಾಯಿಗಳು ದಾಳಿ ಮಾಡಿದ್ದವು.
ಸರಣಿ ಘಟನೆಗಳಿಂದ ಕಂಗಾಲಾಗಿರುವ ಗ್ರಾಮಸ್ಥರು ಹಾಗೂ ನಗರವಾಸಿಗಳು ಜಿಲ್ಲಾಡಳಿತ ಮತ್ತು ಪುರಸಭೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಬೀದಿನಾಯಿಗಳ ಹಾವಳಿ ತಡೆಯಲು ಇನ್ನೆಷ್ಟು ಬಲಿ ಬೇಕು?” ಎಂದು ಸಾರ್ವಜನಿಕರು ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದಾರೆ. ಕೂಡಲೇ ನಾಯಿಗಳ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳದಿದ್ದರೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.



