August 30, 2026
Sunday, August 30, 2026
spot_img

ಪೊಲೀಸರ ಭೀತಿ, ಮನೆಯವರ ವಿರೋಧ: ಒಂದೇ ಹಗ್ಗಕ್ಕೆ ಕೊರಳೊಡ್ಡಿದ ಯುವ ಜೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನೆಯವರ ವಿರೋಧ ಹಾಗೂ ಪೊಲೀಸ್ ದೂರಿನ ಭೀತಿಯಿಂದಾಗಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ವರದಿಯಾಗಿದೆ.

ಪಾಲಾರ್ ಗ್ರಾಮದ ನದಿಯಾ (19) ಹಾಗೂ ನಾಗೇಂದ್ರ (21) ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೇಮಕ್ಕೆ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೀವನದಲ್ಲಿ ಒಂದಾಗಲು ನಿರ್ಧರಿಸಿದ ಈ ಜೋಡಿ, ಮೂರು ದಿನಗಳ ಹಿಂದೆ ಮನೆಯಿಂದ ಓಡಿಹೋಗಿದ್ದರು. ನಾಗೇಂದ್ರ ತನ್ನ ಪ್ರಿಯತಮೆಯನ್ನು ಪೊನ್ನಾಚಿಯಲ್ಲಿರುವ ತನ್ನ ಅಜ್ಜನ ಮನೆಗೆ ಕರೆದುಕೊಂಡು ಬಂದಿದ್ದನು.

ಇತ್ತ ನದಿಯಾ ನಾಪತ್ತೆಯಾದ ಬಗ್ಗೆ ಆತಂಕಗೊಂಡ ಪೋಷಕರು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತಮ್ಮನ್ನು ಹುಡುಕಿಕೊಂಡು ಬರುತ್ತಾರೆ ಮತ್ತು ಮನೆಯವರು ಸೇರಿ ತಮ್ಮನ್ನು ದೂರ ಮಾಡುತ್ತಾರೆ ಎಂಬ ಭಯ ಪ್ರೇಮಿಗಳನ್ನು ಕಾಡತೊಡಗಿದೆ. ಪೊಲೀಸರ ಕೈಗೆ ಸಿಕ್ಕರೆ ಮುಂದೇನು ಎಂಬ ಆತಂಕದಲ್ಲಿ ಇಬ್ಬರೂ ಜತೆಯಲ್ಲೇ ಸಾಯುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.

ಅಜ್ಜನ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ನದಿಯಾ ಮತ್ತು ನಾಗೇಂದ್ರ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !