ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿನ ಹೆಬ್ಬಾಗಿಲು ಶಿಕಾರಿಪುರದ ಆರಾಧ್ಯ ದೈವ, ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ಬ್ರಹ್ಮರಥೋತ್ಸವವು ದವನ ಹುಣ್ಣಿಮೆಯ ಸಡಗರದಲ್ಲಿ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಗುರುವಾರ ಅತ್ಯಂತ ವೈಭವದಿಂದ ನೆರವೇರಿತು.
ಚೈತ್ರ ಶುದ್ಧ ಪೂರ್ಣಿಮೆಯ ಪವಿತ್ರ ಬ್ರಾಹ್ಮಿ ಮುಹೂರ್ತದಲ್ಲಿ, ಅಂದರೆ ಬೆಳಿಗ್ಗೆ 7.15ರ ಮೇಷ ಲಗ್ನದಲ್ಲಿ ಶ್ರೀ ಹುಚ್ಚುರಾಯಸ್ವಾಮಿಯ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿಸಲಾಯಿತು. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಗಣಪತಿ ಪೂಜೆ, ಅಷ್ಟದಿಕ್ಪಾಲಕರಿಗೆ ಮಹಾಬಲಿ ಹಾಗೂ ಮಹಾ ಮಂಗಳಾರತಿಗಳು ಶಾಸ್ತ್ರೋಕ್ತವಾಗಿ ನಡೆದವು. ಋತ್ವಿಜರ ವೇದಘೋಷ ಹಾಗೂ ಮಂಗಲವಾದ್ಯಗಳ ನಾದದ ನಡುವೆ ರಥೋತ್ಸವದ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು.
ರಥೋತ್ಸವದ ವೇಳೆ ಆಕಾಶದಲ್ಲಿ ಗರುಡ ಪಕ್ಷಿಯು ಮೂರು ಬಾರಿ ಪ್ರದಕ್ಷಿಣೆ ಹಾಕಿದ್ದು ನೆರೆದಿದ್ದ ಭಕ್ತರಲ್ಲಿ ಅಚ್ಚರಿ ಮತ್ತು ಭಕ್ತಿಯ ಭಾವ ಮೂಡಿಸಿತು. ಸಾಕ್ಷಾತ್ ಶ್ರೀಹರಿಯ ವಾಹನವಾದ ಗರುಡನೇ ಈ ಸಂಭ್ರಮಕ್ಕೆ ಸಾಕ್ಷಿಯಾದದ್ದು ಜಾತ್ರೆಯ ವಿಶೇಷವಾಗಿತ್ತು.
ಈ ಧಾರ್ಮಿಕ ಮಹೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಅವರ ಕುಟುಂಬಸ್ಥರು ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಥೋತ್ಸವದ ಅಂಗವಾಗಿ ನಡೆದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಇಡೀ ಶಿಕಾರಿಪುರ ಪಟ್ಟಣವು ಭಕ್ತಿ ಪರವಶತೆಯಲ್ಲಿ ಮುಳುಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.



