ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಮೂಲದ ಪ್ರಸಿದ್ಧ ಟೆಕ್ ಕಂಪನಿ ಒರಾಕಲ್ ಕಾರ್ಪೋರೇಶನ್ ಗೆ ಸಂಬಂಧಿಸಿದ ದುಬೈ ಕಚೇರಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆಯೆಂಬ ವರದಿಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿವೆ. ಆದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ದುಬೈ ಅಧಿಕಾರಿಗಳು ಮಹತ್ವದ ಸ್ಪಷ್ಟನೆ ನೀಡಿದ್ದು, ಆರಂಭಿಕ ವರದಿಗಳಿಗೆ ವಿರುದ್ಧವಾದ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ಬಿಡಿಸಿರುವ ಕಂಪನಿಗೆ ಇದು ಮತ್ತೊಂದು ದೊಡ್ಡ ಸುದ್ದಿಯಾಗಿದೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ (IRGC) ದುಬೈಯಲ್ಲಿರುವ ಒರಾಕಲ್ ಡೇಟಾ ಸೆಂಟರ್ನ್ನು ಗುರಿಯಾಗಿಸಿ ದಾಳಿ ನಡೆಸಿದ್ದೇವೆ ಎಂದು ಹೇಳಿಕೆ ನೀಡಿತ್ತು. ಈ ಹೇಳಿಕೆ ಹೊರಬಂದ ತಕ್ಷಣ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ದುಬೈ ಮೀಡಿಯಾ ಕಚೇರಿ ಈ ವರದಿಗಳನ್ನು “ಸುಳ್ಳು ಸುದ್ದಿ” ಎಂದು ತಳ್ಳಿಹಾಕಿದ್ದು, ಯಾವುದೇ ನೇರ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೂ, ನಂತರ ಮತ್ತೊಂದು ಬೆಳವಣಿಗೆಯಲ್ಲಿ ವೈಮಾನಿಕ ತಡೆ ಕ್ರಮದ ವೇಳೆ ಕೆಳಗೆ ಬಿದ್ದ ಅವಶೇಷಗಳು ದುಬೈ ಇಂಟರ್ನೆಟ್ ಸಿಟಿಯಲ್ಲಿರುವ ಒರಾಕಲ್ ಕಟ್ಟಡದ ಮುಂಭಾಗಕ್ಕೆ ತಗುಲಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಣ್ಣ ಮಟ್ಟದದ್ದಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಮಾಹಿತಿ ನೀಡಲಾಗಿದೆ. ಕಟ್ಟಡದ ಹೊರಭಾಗಕ್ಕೆ ಸಣ್ಣ ಪ್ರಮಾಣದ ಹಾನಿ ಸಂಭವಿಸಿದರೂ ಪರಿಸ್ಥಿತಿ ತಕ್ಷಣ ನಿಯಂತ್ರಣಕ್ಕೆ ತರಲಾಗಿದೆ.
ಇದನ್ನೂ ಓದಿ:
ಇದೇ ಸಮಯದಲ್ಲಿ ಒರಾಕಲ್ ಕಂಪನಿಯ ಉದ್ಯೋಗ ಕಡಿತವೂ ಭಾರೀ ಚರ್ಚೆಗೆ ಕಾರಣವಾಗಿದೆ. ಕಂಪನಿ ಇತ್ತೀಚೆಗೆ ಭಾರತ ಸೇರಿದಂತೆ ವಿಶ್ವಾದ್ಯಂತ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂಬ ವರದಿಗಳು ಹೊರಬಂದಿವೆ. ಭಾರತದಲ್ಲೇ ಸುಮಾರು 12,000 ಉದ್ಯೋಗಿಗಳು ಈ ಕಡಿತದ ಪರಿಣಾಮಕ್ಕೆ ಒಳಗಾಗಿರುವುದಾಗಿ ತಿಳಿದುಬಂದಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧೋನ್ಮಾದ ಮತ್ತು ಅಮೆರಿಕ ಮೂಲದ ಕಂಪನಿಗಳ ಮೇಲೆ ಗುರಿ ಸಾಧಿಸುವ ಬೆದರಿಕೆಗಳ ನಡುವೆ, ಒರಾಕಲ್ ಕಚೇರಿ ಕುರಿತು ಬಂದಿರುವ ಈ ವರದಿಗಳು ಜಾಗತಿಕ ಟೆಕ್ ವಲಯದಲ್ಲಿ ಆತಂಕ ಹೆಚ್ಚಿಸಿವೆ. ಆದರೆ ದುಬೈ ಸರ್ಕಾರದ ಅಧಿಕೃತ ಸ್ಪಷ್ಟನೆಯ ಪ್ರಕಾರ ನೇರ ಕ್ಷಿಪಣಿ ದಾಳಿ ನಡೆದಿಲ್ಲ, ಕೇವಲ ತಡೆ ಕ್ರಮದ ಅವಶೇಷಗಳಿಂದ ಸಣ್ಣ ಘಟನೆ ಸಂಭವಿಸಿದೆ ಎನ್ನುವುದು ಈಗಿನ ಸ್ಥಿತಿ.
ಇದರಿಂದ ಟೆಕ್ ಕಂಪನಿಗಳ ಭದ್ರತೆ, ಡೇಟಾ ಸೆಂಟರ್ಗಳ ಸುರಕ್ಷತೆ ಹಾಗೂ ಜಾಗತಿಕ ಉದ್ಯೋಗ ಪರಿಸ್ಥಿತಿಗಳ ಬಗ್ಗೆ ಮತ್ತೊಮ್ಮೆ ಚರ್ಚೆ ತೀವ್ರಗೊಂಡಿದೆ.



