ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಐಪಿಎಲ್ 2026ರ ಬಹು ನಿರೀಕ್ಷಿತ ಹೈ-ವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಈ ಕಾದಾಟದಲ್ಲಿ ಆರ್‌ಸಿಬಿ ಭರ್ಜರಿ ಪ್ರದರ್ಶನ ನೀಡಿದ್ದು, ಅದರ ಕೇಂದ್ರಬಿಂದುವಾಗಿ ಟಿಮ್ ಡೇವಿಡ್ ಹೊರಹೊಮ್ಮಿದರು.
ಸ್ಫೋಟಕ ಬ್ಯಾಟಿಂಗ್ ಮೂಲಕ ಪಂದ್ಯವನ್ನು ಸಂಪೂರ್ಣವಾಗಿ ತನ್ನತ್ತ ತಿರುಗಿಸಿಕೊಂಡ ಡೇವಿಡ್, ಸಿಎಸ್‌ಕೆ ಬೌಲರ್‌ಗಳ ಮೇಲೆ ಅಬ್ಬರಿಸಿ ತಂಡಕ್ಕೆ ಗೆಲುವು ತಂದರು.
ಆಟದ ಬಳಿಕ ಮಾತನಾಡಿದ ಟಿಮ್ ಡೇವಿಡ್, ತಮ್ಮ ಇನ್ನಿಂಗ್ಸ್ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನನ್ನ ಪ್ರದರ್ಶನದಿಂದ ತುಂಬಾ ಖುಷಿಯಾಗಿದೆ. ಆರಂಭದಲ್ಲಿ ನಾಯಕ ರಜತ್ ಪಾಟಿದಾರ್ ಅದ್ಭುತ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಚೆಂಡನ್ನು ಎಲ್ಲ ದಿಕ್ಕುಗಳಿಗೂ ಬಾರಿಸುತ್ತಿದ್ದರೆ, ನಾನು ಅವರ ಜೊತೆ ಉತ್ತಮ ಜೊತೆಯಾಟ ಕಟ್ಟಲು ಪ್ರಯತ್ನಿಸಿದೆ. ಅವರ ದಾಳಿಯೇ ನಮ್ಮ ತಂಡಕ್ಕೆ ದೊಡ್ಡ ಮೊತ್ತ ಕಟ್ಟಲು ಬುನಾದಿ ಹಾಕಿತು, ಎಂದು ಹೇಳಿದರು.
ಪಂದ್ಯದ ಪ್ರಮುಖ ಕ್ಷಣವಾಗಿ ಟಿಮ್ ಡೇವಿಡ್ ಸಿಡಿಸಿದ 106 ಮೀಟರ್ ದೈತ್ಯ ಸಿಕ್ಸರ್ ಗಮನಸೆಳೆಯಿತು. ಈ ಶಾಟ್ ನೇರವಾಗಿ ಮೈದಾನದ ಛಾವಣಿ ದಾಟಿ ಹೊರಗೆ ಹೋಗಿದ್ದು, ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿತು. ಈ ಬಗ್ಗೆ ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ ಅವರು, ಪ್ರಾಕ್ಟೀಸ್ ವೇಳೆ ನಾವು ಛಾವಣಿ ಮೇಲೆ ಚೆಂಡು ಹೊಡೆಯುವ ಸ್ಪರ್ಧೆ ಮಾಡುತ್ತೇವೆ. ಕೆಲವೊಮ್ಮೆ ಕೋಚ್‌ಗಳ ಬಳಿ ಬೈಗುಳ ಕೂಡ ಕೇಳಬೇಕು. ಆದರೆ ಪಂದ್ಯದಲ್ಲಿ ಅದೇ ರೀತಿ ಸಿಕ್ಸರ್ ಹೊಡೆದದ್ದು ತುಂಬಾ ಸಂತೋಷ ಕೊಟ್ಟಿತು, ಎಂದರು.
ಇದನ್ನೂ ಓದಿ:
ಇದೇ ವೇಳೆ ಹಿರಿಯ ಆಟಗಾರ ದಿನೇಶ್ ಕಾರ್ತಿಕ್ ಅವರ ಮಾರ್ಗದರ್ಶನವನ್ನು ಡೇವಿಡ್ ವಿಶೇಷವಾಗಿ ಉಲ್ಲೇಖಿಸಿದರು. ಡಿ.ಕೆ ಅವರಂತಹ ಅನುಭವಿಯೊಂದಿಗೆ ಕೆಲಸ ಮಾಡುವುದು ನನ್ನ ಅದೃಷ್ಟ. ಇಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹೇಗೆ ಆಡಬೇಕು, ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ಹೇಗೆ ಇರಬೇಕು ಎಂಬುದನ್ನು ಅವರು ಕಲಿಸುತ್ತಾರೆ, ಎಂದು ಹೇಳಿದರು.
ತಂಡದ ಇತರ ಫಿನಿಷರ್‌ಗಳ ಬೆಂಬಲವೂ ತಮ್ಮ ಆಟಕ್ಕೆ ಆತ್ಮವಿಶ್ವಾಸ ನೀಡುತ್ತದೆ ಎಂದು ಡೇವಿಡ್ ಹೇಳಿದರು. ನನ್ನ ಹಿಂದೆ ಜಿತೇಶ್ ಮತ್ತು ರೊಮಾರಿಯೋ ಶೆಫರ್ಡ್ ಅವರಂತಹ ಪವರ್ ಹಿಟ್ಟರ್ಸ್ ಇದ್ದಾರೆ ಎಂಬ ವಿಶ್ವಾಸದಿಂದ ನಾನು ಮುಕ್ತವಾಗಿ ಆಕ್ರಮಣಕಾರಿ ಆಟ ಆಡಲು ಸಾಧ್ಯವಾಗುತ್ತದೆ. ಒಳ್ಳೆಯ ದಿನಗಳನ್ನು ಆನಂದಿಸುತ್ತೇನೆ, ಕಠಿಣ ದಿನಗಳಿಂದ ಪಾಠ ಕಲಿಯುತ್ತೇನೆ, ಎಂದು ತಮ್ಮ ಮನದಾಳದ ಮಾತು ಹಂಚಿಕೊಂಡರು.



