ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯ ಅಡ್ಡಿಯ ನಡುವೆಯೂ ನಡೆದ ಐಪಿಎಲ್‌ನ 13ನೇ ಹಣಾಹಣಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.
ಮಳೆಯ ಕಾರಣ 11 ಓವರ್‌ಗಳಿಗೆ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬೌಲಿಂಗ್ ಆಯ್ದುಕೊಂಡರು. ಆದರೆ ರಾಜಸ್ಥಾನ್ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ದೀಪಕ್ ಚಹರ್ ಎಸೆದ ಮೊದಲ ಓವರ್‌ನಲ್ಲೇ ಜೈಸ್ವಾಲ್ 22 ರನ್ ಚಚ್ಚಿದರೆ, ಬುಮ್ರಾ ಓವರ್‌ನಲ್ಲಿ ಸೂರ್ಯವಂಶಿ ಎರಡು ಸಿಕ್ಸರ್ ಸಿಡಿಸಿದರು. ಕೇವಲ 3 ಓವರ್‌ಗಳಲ್ಲಿ ಈ ಜೋಡಿ 50 ರನ್‌ಗಳ ಗಡಿ ದಾಟಿಸಿ ಸ್ಫೋಟಕ ಆರಂಭ ನೀಡಿತು.
ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ ಬಾರಿಸಿ ನಿರ್ಗಮಿಸಿದರೆ, ಜೈಸ್ವಾಲ್ ಅಜೇಯ ಆಟ ಮುಂದುವರೆಸಿದರು. ಕೇವಲ 32 ಎಸೆತಗಳಲ್ಲಿ 10 ಫೋರ್ ಹಾಗೂ 4 ಸಿಕ್ಸರ್ ಸಹಿತ 77 ರನ್ ಸಿಡಿಸಿದ ಜೈಸ್ವಾಲ್ ನೆರವಿನಿಂದ ರಾಜಸ್ಥಾನ್ 11 ಓವರ್‌ಗಳಲ್ಲಿ 150 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
151 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ (5), ಸೂರ್ಯಕುಮಾರ್ ಯಾದವ್ (6), ಹಾರ್ದಿಕ್ ಪಾಂಡ್ಯ (9) ಮತ್ತು ತಿಲಕ್ ವರ್ಮಾ (14) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ ಮತ್ತು ಶೆರ್ಫೇನ್ ರದರ್ ಫೋರ್ಡ್ (25 ರನ್, 17 ಎಸೆತ) ಬಿರುಸಿನ ಬ್ಯಾಟಿಂಗ್ ನಡೆಸಿ ಭರವಸೆ ಮೂಡಿಸಿದರಾದರೂ, ಜಯ ತಂದುಕೊಡಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ 11 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ 27 ರನ್‌ಗಳಿಂದ ಗೆಲುವಿನ ನಗೆ ಬೀರಿದೆ.



