ಹೊಸದಿಗಂತ ಬೀದರ್:
ಬೀದರ್‌ನ ಐತಿಹಾಸಿಕ ನೆಲದಲ್ಲಿ ಸಾಹಿತ್ಯ ಮತ್ತು ಚಿಂತನೆಗಳ ಸಮಾಗಮವಾಗಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ಹಿನ್ನೆಲೆಯಲ್ಲಿ, ಇಡೀ ನಗರವು ಗುರುವಾರ ಅಕ್ಷರಶಃ ಪತ್ರಿಕಾ ಲೋಕದ ಹಬ್ಬಕ್ಕೆ ಸಾಕ್ಷಿಯಾಯಿತು. ಸಮ್ಮೇಳನದ ಪ್ರಚಾರ ಸಮಿತಿ ಆಯೋಜಿಸಿದ್ದ ಬೃಹತ್ ಬೈಕ್ ರ್ಯಾಲಿಯು ಸಾರ್ವಜನಿಕರಲ್ಲಿ ಕುತೂಹಲ ಮತ್ತು ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ನಗರದ ಹೃದಯಭಾಗವಾದ ಬಸವೇಶ್ವರ ವೃತ್ತದಲ್ಲಿ ವರ್ಣರಂಜಿತ ಬಲೂನ್‌ಗಳನ್ನು ಆಕಾಶಕ್ಕೆ ಹಾರಿಬಿಡುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಈ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ಬಸವ ಗಂಗೋತ್ರಿಯ ಶ್ರೀ ಚನ್ನಬಸವಾನಂದ ಸ್ವಾಮೀಜಿ ಅವರು ಉಪಸ್ಥಿತರಿದ್ದು, ಪತ್ರಕರ್ತರ ಈ ಒಕ್ಕೂಟಕ್ಕೆ ಆಶೀರ್ವಚನ ನೀಡಿದರು. ಸಮಾಜದ ಓರೆಕೋರೆಗಳನ್ನು ತಿದ್ದುವ ಪತ್ರಕರ್ತರು ಇಂತಹ ಸಮ್ಮೇಳನಗಳ ಮೂಲಕ ಒಂದಾಗುತ್ತಿರುವುದು ಶ್ಲಾಘನೀಯ ಎಂದು ಹರಸಿದರು.

ನೂರಾರು ಪತ್ರಕರ್ತರು ಶಿಸ್ತಿನ ಸಿಪಾಯಿಗಳಂತೆ ಹೆಲ್ಮೆಟ್ ಧರಿಸಿ, ಸಂಚಾರ ನಿಯಮಗಳನ್ನು ಪಾಲಿಸುತ್ತಲೇ ರ್ಯಾಲಿಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೈಕ್‌ಗಳಿಗೆ ಸಮ್ಮೇಳನದ ಲಾಂಛನವಿರುವ ಆಕರ್ಷಕ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು.

ಬಸವೇಶ್ವರ ವೃತ್ತದಿಂದ ಆರಂಭಗೊಂಡು ಮಹಾವೀರ ವೃತ್ತ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ವೃತ್ತ, ಛತ್ರಪತಿ ಶಿವಾಜಿ ವೃತ್ತ, ಕ್ರಾಂತಿಕಾರಿ ಹರಳಯ್ಯ ವೃತ್ತದ ಮೂಲಕ ಸಾಗಿತು. ಮುಂದುವರಿದು ಕೇಂದ್ರ ಬಸ್ ನಿಲ್ದಾಣ ಮತ್ತು ಶಿವನಗರ ಮಾರ್ಗವಾಗಿ ಹಾಯ್ದು ಪ್ರತಾಪನಗರದ ಪತ್ರಿಕಾ ಭವನದಲ್ಲಿ ಸಮಾರೋಪಗೊಂಡಿತು.
ರ್ಯಾಲಿಯುದ್ದಕ್ಕೂ “ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಜಯವಾಗಲಿ” ಮತ್ತು “ರಾಜ್ಯ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಲಿ” ಎಂಬ ಘೋಷಣೆಗಳು ಮೊಳಗಿದವು.
ಕಾರ್ಯಕ್ರಮದ ಆರಂಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ದೇವಪ್ಪ ಅವರು ಪ್ರೀತಿಯ ಸಂಕೇತವಾಗಿ ಗುಲಾಬಿ ಹೂವು ಮತ್ತು ಜ್ಞಾನದ ಸಂಕೇತವಾಗಿ ಪೆನ್ನನ್ನು ಅತಿಥಿಗಳಿಗೆ ನೀಡುವ ಮೂಲಕ ಅತ್ಯಂತ ಸಂಪ್ರದಾಯಬದ್ಧವಾಗಿ ಸ್ವಾಗತಿಸಿದರು.
ಕೇವಲ ಪ್ರಚಾರಕ್ಕೆ ಸೀಮಿತವಾಗದೆ, ಸಾಮಾಜಿಕ ಜವಾಬ್ದಾರಿಯನ್ನೂ ಮೆರೆದ ಈ ರ್ಯಾಲಿಯ ಭಾಗವಾಗಿ ಜಿಲ್ಲಾ ಪೊಲೀಸ್ ಇಲಾಖೆಯು ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸಿತು. ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಎಸ್ಪಿ ಪ್ರದೀಪ್ ಗುಂಟಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಹೆಚ್ಚುವರಿ ಎಸ್ಪಿ ಚಂದ್ರಕಾಂತ ಪೂಜಾರಿ ಮತ್ತು ಸಿಪಿಐ ರಮೇಶ್ ಮೈಲೂರಕರ್ ಸಾಥ್ ನೀಡಿದರು.
ಈ ಅಭೂತಪೂರ್ವ ರ್ಯಾಲಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ಪ್ರಚಾರ ಸಮಿತಿಯ ನಾಗೇಶ ಪ್ರಭಾ, ಮಲ್ಲಿಕಾರ್ಜುನ ನಾಗರಾಳ ಸೇರಿದಂತೆ ಜಿಲ್ಲೆಯ ಹಿರಿಯ ಹಾಗೂ ಕಿರಿಯ ಪತ್ರಕರ್ತರು, ಮಹಿಳಾ ಪತ್ರಕರ್ತರು ಮತ್ತು ಅಡಾಕ್ ಸಮಿತಿಯ ಸದಸ್ಯರು ಬಹುಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಸಂಕಲ್ಪ ಮಾಡಿದರು.



