ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಹತ್ವದ ಬದಲಾವಣೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ನೀಡುವುದನ್ನು ಸ್ಥಗಿತಗೊಳಿಸಿ, ಸಂಪೂರ್ಣ ಡಿಜಿಟಲ್ ಅಂಕಪಟ್ಟಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ವರ್ಷದ ಫಲಿತಾಂಶ ಪ್ರಕಟಣೆ ಸಂದರ್ಭದಲ್ಲೇ ವಿದ್ಯಾರ್ಥಿಗಳಿಗೆ ಮೊದಲ ಬಾರಿಗೆ ಡಿಜಿಲಾಕರ್ ಮೂಲಕ ಅಂಕಪಟ್ಟಿ ಡೌನ್‌ಲೋಡ್ ಮಾಡುವ ಸೌಲಭ್ಯ ನೀಡಲಾಗಿದೆ.
ಇದನ್ನೂ ಓದಿ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ವರ್ಷ ಮಾತ್ರ ಮುದ್ರಿತ ಹಾಗೂ ಡಿಜಿಟಲ್ ಎರಡೂ ರೂಪಗಳಲ್ಲಿ ಅಂಕಪಟ್ಟಿ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಮುಂದಿನ ಸಾಲಿನಿಂದ ಡಿಜಿಟಲ್ ಅಂಕಪಟ್ಟಿಯೇ ಅಧಿಕೃತ ದಾಖಲೆ ಆಗಲಿದೆ. ಇದರಿಂದ ಸರ್ಕಾರದ ಮುದ್ರಣ ವೆಚ್ಚ ಮತ್ತು ಆಡಳಿತಾತ್ಮಕ ಹೊರೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದರು.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ಐತಿಹಾಸಿಕ ಸಾಧನೆ ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದ ಅವರು, ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಮಂಡಳಿ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.



