Friday, October 31, 2025

ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲು ಪರೀಕ್ಷೆ: ಶೀಘ್ರದಲ್ಲೇ ಆರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ಮೆಟ್ರೋ ಸೇವೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಹಳದಿ ಮಾರ್ಗದಲ್ಲಿ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆರ್‌.ವಿ.ರಸ್ತೆ – ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದಲ್ಲಿ ನಾಲ್ಕನೇ ರೈಲಿನ ಸಂಚಾರ ಪರೀಕ್ಷೆ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ಮೊದಲ ವಾರದಲ್ಲೇ ಕಾರ್ಯಾಚರಣೆಗೆ ಬಿಡುಗಡೆ ಮಾಡಲಾಗುವ ನಿರೀಕ್ಷೆಯಿದೆ. ಈ ಕ್ರಮದಿಂದ ಪ್ರಯಾಣಿಕರಿಗೆ ರೈಲುಗಳ ಆವರ್ತನ ಕಡಿಮೆಯಾಗಲಿದ್ದು, ಸಂಚಾರ ಇನ್ನಷ್ಟು ಸುಗಮವಾಗಲಿದೆ.

ಹೊಸ ರೈಲು ಸೇರ್ಪಡೆ:
ಈ ಮಾರ್ಗವನ್ನು ಆಗಸ್ಟ್ 10ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಪ್ರಸ್ತುತ ಮೂರು ರೈಲುಗಳು 25 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ನಾಲ್ಕನೇ ರೈಲು ಕಾರ್ಯಾಚರಣೆಗೆ ಬಂದ ಬಳಿಕ ಆವರ್ತನವು 18-20 ನಿಮಿಷಕ್ಕೆ ಕಡಿಮೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಆರು ಬೋಗಿಗಳನ್ನು ಹೊಂದಿರುವ ಈ ರೈಲು ಕೊಲ್ಕತ್ತಾದಿಂದ ಆಗಸ್ಟ್ 15ರಂದು ಹೆಬ್ಬಗೋಡಿ ಮೆಟ್ರೋ ಡಿಪೋ ತಲುಪಿದ್ದು, ಇಲ್ಲಿ ಜೋಡಣೆ ಮಾಡಿ ಸಿಬಿಟಿಸಿ ಸಿಗ್ನಲಿಂಗ್ ತಂತ್ರಜ್ಞಾನದಲ್ಲಿ ಪರೀಕ್ಷೆ ನಡೆಯುತ್ತಿದೆ.

ಈ ಮಾರ್ಗದ ಆರಂಭದ ಬಳಿಕ ಸರಾಸರಿ ಪ್ರಯಾಣಿಕರ ಸಂಖ್ಯೆ ದಿನಕ್ಕೆ 9.15 ಲಕ್ಷಕ್ಕೆ ತಲುಪಿದೆ. ಆದರೆ ರೈಲುಗಳ ಕೊರತೆಯಿಂದ ಆರ್‌.ವಿ.ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ ಸೇರಿ ಕೆಲವು ಕಡೆಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. 25 ನಿಮಿಷಗಳ ಕಾಯುವಿಕೆಯ ತೊಂದರೆಯಿಂದಾಗಿ ಹೆಚ್ಚಿನ ರೈಲುಗಳನ್ನು ಸೇರಿಸುವಂತೆ ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ಮುಂದಿನ ಯೋಜನೆಗಳು:
ಸೆಪ್ಟೆಂಬರ್ ಅಂತ್ಯದೊಳಗೆ ಮತ್ತೊಂದು ರೈಲು ಕೊಲ್ಕತ್ತಾದ ತಿತಾಘಟ್ ರೈಲ್ ಸಿಸ್ಟಂನಿಂದ ಬರುವ ನಿರೀಕ್ಷೆಯಿದೆ. ಇನ್ನೆರಡು ರೈಲುಗಳು ಸೇರ್ಪಡೆಗೊಂಡರೆ ಹಳದಿ ಮಾರ್ಗದಲ್ಲಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 11 ಲಕ್ಷ ದಾಟಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!