ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್‌ನಲ್ಲಿ ನಡೆದ 40ನೇ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪತ್ರಿಕೋದ್ಯಮದ ಇಂದಿನ ಸ್ಥಿತಿಗತಿ ಮತ್ತು ಜವಾಬ್ದಾರಿಗಳ ಬಗ್ಗೆ ಮಹತ್ವದ ಮಾತುಗಳನ್ನು ಆಡಿದರು.
ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಎಂದೂ ಕೂಡ ಪತ್ರಕರ್ತರಿಗೆ ಸರ್ಕಾರದ ಪರವಾಗಿ ಬರೆಯುವಂತೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಸುದ್ದಿಗಳು ಸತ್ಯಕ್ಕೆ ಹತ್ತಿರವಾಗಿರಬೇಕು ಮತ್ತು ವಸ್ತುನಿಷ್ಠವಾಗಿರಬೇಕು ಎಂದು ಆಶಿಸಿದರು.
ಇಂದಿನ ದಿನಗಳಲ್ಲಿ ಸಣ್ಣಪುಟ್ಟ ವೈಯಕ್ತಿಕ ವಿಚಾರಗಳನ್ನು ಅಥವಾ ಗಂಡ-ಹೆಂಡತಿ ಜಗಳದಂತಹ ಕ್ಷುಲ್ಲಕ ವಿಷಯಗಳನ್ನು ದಿನವಿಡೀ ಪ್ರಸಾರ ಮಾಡುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ. ಇಂತಹ ‘ಊಹಾ ಪತ್ರಿಕೋದ್ಯಮ’ ಸಮಾಜಕ್ಕೆ ಅಪಾಯಕಾರಿ ಎಂದು ಅವರು ಎಚ್ಚರಿಸಿದರು.
ಗಾಂಧೀಜಿ ಮತ್ತು ಅಂಬೇಡ್ಕರ್ ಅವರು ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಿಕೋದ್ಯಮವನ್ನು ಬಳಸಿಕೊಂಡಿದ್ದರು. ಬಸವಾದಿ ಶರಣರ ಸಮಸಮಾಜದ ಕನಸನ್ನು ನನಸು ಮಾಡುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ.
ಕೇವಲ ಮಾಹಿತಿ ನೀಡುವುದಷ್ಟೇ ಪತ್ರಕರ್ತರ ಕೆಲಸವಲ್ಲ, ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.



