April 16, 2026
Thursday, April 16, 2026
spot_img

ಕಗ್ಗತ್ತಲಲ್ಲಿ ಕರಗಿ ಹೋಯಿತು ಪ್ರಾಣ: ರೈಲು ಡಿಕ್ಕಿ ಹೊಡೆದು ಐವರ ದುರ್ಮ*ರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕರ್ಚನಾ ಪ್ರದೇಶದ ಪಚ್‌ದೇವರ ಹಾಲ್ಟ್ ಸಮೀಪ ಬುಧವಾರ ರಾತ್ರಿ ನಡೆದ ಭೀಕರ ರೈಲು ದುರಂತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊದಲು ಒಂದು ವ್ಯಕ್ತಿ ಕಾಲ್ಕಾ ಎಕ್ಸ್‌ಪ್ರೆಸ್‌ಗೆ ಸಿಲುಕಿ ಮೃತಪಟ್ಟಿದ್ದಾನೆ. ಈ ಕಾರಣದಿಂದ ರೈಲನ್ನು ನಿಲ್ಲಿಸಲಾಗಿತ್ತು. ರೈಲು ನಿಂತ ಬಳಿಕ ಕೆಲ ಪ್ರಯಾಣಿಕರು ಕುತೂಹಲದಿಂದ ಹಳಿಗಳ ಮೇಲೆ ಇಳಿದಿದ್ದರು. ಇದೇ ವೇಳೆ ಪಕ್ಕದ ಹಳಿಯಲ್ಲಿ ವೇಗವಾಗಿ ಬಂದ ಪುರಷೋತ್ತಮ ಎಕ್ಸ್‌ಪ್ರೆಸ್ ನಾಲ್ವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರ ಶವಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಗುರುತು ಪತ್ತೆ ಕಾರ್ಯ ಮುಂದುವರಿದಿದೆ. ರೈಲ್ವೆ ರಕ್ಷಣಾ ಪಡೆ (GRP) ಹಾಗೂ ಸ್ಥಳೀಯ ಪೊಲೀಸರು ಅಪಘಾತದ ನಿಖರ ಕಾರಣ ಕುರಿತು ತನಿಖೆ ಆರಂಭಿಸಿದ್ದಾರೆ. ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಬಳಿಕ ಹಳಿಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನರಾರಂಭಿಸಲಾಗಿದೆ.

ಪ್ರಯಾಣಿಕರು ಅನಗತ್ಯವಾಗಿ ಹಳಿಗಳ ಮೇಲೆ ಇಳಿಯಬಾರದು ಮತ್ತು ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !