ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಚೂರಿನಲ್ಲಿ ಬಯಲಾಟದ ವೇಳೆ ಸಿಮೆಂಟ್‌ನ ಬೋರ್ಡ್ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇನ್ನಿಬ್ಬರು ಕಾಲುಗಳನ್ನು ಕಳೆದುಕೊಂಡಿದ್ದಾರೆ.
ಬೈಲ್ ಮರ್ಚಡ್ ಗ್ರಾಮದಲ್ಲಿ ಹಳೆಯ ಕಟ್ಟಡದ ನಾಮಫಲಕದ ಸಿಮೆಂಟ್ ಬೋರ್ಡ್ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳ ಪ್ರಾಣ ಹೋಗಿದ್ದು, ನಾಲ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.
ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಯಲಾಟವನ್ನು ನೋಡಲು ಗ್ರಾಮಸ್ಥರೆಲ್ಲರೂ ಸಂಭ್ರಮದಿಂದ ಜಮಾಯಿಸಿದ್ದರು. ಈ ವೇಳೆ ಅನೇಕರು ಗ್ರಾಮದ ಚಾವಡಿ ಕಟ್ಟೆಯ ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಹಳೆಯದಾಗಿದ್ದ ಚಾವಡಿ ಕಟ್ಟಡದ ಮೇಲ್ಭಾಗದಲ್ಲಿದ್ದ ಸಿಮೆಂಟ್‌ನ ನಾಮಫಲಕದ ಬೋರ್ಡ್ ಆಯತಪ್ಪಿ ಕೆಳಗೆ ಕುಳಿತಿದ್ದವರ ಮೇಲೆ ಬಿದ್ದಿದೆ. ಇನ್ನು ಮೃತರನ್ನು ವಿಶ್ವನಾಥ್ (8 ವರ್ಷ) ಹಾಗೂ ಸನ್ವಿತಾ (1.6 ವರ್ಷ) ಎಂದು ಗುರುತಿಸಲಾಗಿದೆ.
ದುರಂತದ ತೀವ್ರತೆಗೆ ಸಿಮೆಂಟ್ ಬೋರ್ಡ್ ಅಡಿಯಲ್ಲಿ ಸಿಲುಕಿದ ಬಸಮ್ಮ (38) ಅವರ ಒಂದು ಕಾಲು ಕಟ್ ಆಗಿದ್ದರೆ, ಅವರ ಮಗಳು ಲಕ್ಷ್ಮಿ (17) ಅವರ ಎರಡು ಕಾಲುಗಳು ಕಟ್ ಆಗಿವೆ. ಇವರ ಜೊತೆಗೆ ವಿಶಾಲಮ್ಮ (20) ಮತ್ತು 4 ವರ್ಷದ ಮಗು ಯಲ್ಲಮ್ಮ ಎಂಬುವವರಿಗೂ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ರಾಯಚೂರಿನ ಓಪೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.



