ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್‌ನ 19ನೇ ಆವೃತ್ತಿಯಲ್ಲಿ ಸತತ ಏರಿಳಿತಗಳನ್ನು ಕಾಣುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ತಂಡದ ಭರವಸೆಯ ಯುವ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ಹ್ಯಾಮ್‌ಸ್ಟ್ರಿಂಗ್ ಗಾಯದ ಸಮಸ್ಯೆಯಿಂದಾಗಿ ಕನಿಷ್ಠ ಮೂರು ವಾರಗಳ ಕಾಲ ಮೈದಾನದಿಂದ ಹೊರಗುಳಿಯಲಿದ್ದಾರೆ.
ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರನ್ ಓಡುವ ವೇಳೆ ಆಯುಷ್ ಮ್ಹಾತ್ರೆ ಗಾಯಗೊಂಡಿದ್ದರು. ಎಡಗಾಲಿನ ಸ್ನಾಯು ಸೆಳೆತದ ನೋವಿನ ನಡುವೆಯೂ 30 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಆದರೆ ಈಗ ಸ್ಕ್ಯಾನಿಂಗ್ ವರದಿಯು ಗಾಯ ಗಂಭೀರವಾಗಿದೆ ಎಂದು ದೃಢಪಡಿಸಿದ್ದು, ವೈದ್ಯರು ಕಡ್ಡಾಯವಾಗಿ ಮೂರು ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ.
ಈ ಬಾರಿಯ ಸೀಸನ್‌ನಲ್ಲಿ ಆಯುಷ್ ಅದ್ಭುತ ಫಾರ್ಮ್‌ನಲ್ಲಿದ್ದರು. 6 ಪಂದ್ಯಗಳಲ್ಲಿ 177ರ ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಸಿಡಿಸಿ ತಂಡಕ್ಕೆ ಸ್ಫೋಟಕ ಆರಂಭ ನೀಡುತ್ತಿದ್ದರು. ಈಗಾಗಲೇ ಖಲೀಲ್ ಅಹ್ಮದ್, ನಾಥನ್ ಎಲ್ಲಿಸ್ ಮತ್ತು ಸ್ಪೆನ್ಸರ್ ಜಾನ್ಸನ್ ಅವರಂತಹ ಪ್ರಮುಖ ವೇಗಿಗಳನ್ನು ಗಾಯದ ಕಾರಣಕ್ಕೆ ಕಳೆದುಕೊಂಡಿರುವ ಚೆನ್ನೈಗೆ, ಈಗ ಮ್ಹಾತ್ರೆ ಅಲಭ್ಯತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾಯಕ ಧೋನಿ ಅವರ ಫಿಟ್ನೆಸ್ ಕೂಡ ಆತಂಕಕ್ಕೆ ಕಾರಣವಾಗಿದೆ.
ಮುಂಬರುವ ‘ಎಲ್-ಕ್ಲಾಸಿಕೊ’ ಹಣಾಹಣಿಯಲ್ಲಿ (ಏಪ್ರಿಲ್ 23 – ಮುಂಬೈ ಇಂಡಿಯನ್ಸ್ ವಿರುದ್ಧ) ಆಯುಷ್ ಬದಲಿಗೆ ಉರ್ವಿಲ್ ಪಟೇಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಸದ್ಯ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಸಿಎಸ್‌ಕೆ, ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.



