ಹೊಸದಿಗಂತ ವರದಿ, ಬೀದರ್:
ಬೀದರ್ ಜಿಲ್ಲೆಯ ಶಿವಯೋಗಿ ಶರಣರು, ಸಂತರು, ಬಸವೇಶ್ವರರು ಬಾಳಿ ಸಮಾನತೆ ಸಾರಿದ ಪವಿತ್ರ ನಾಡು ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಇಂದು ಏರ್ಪಡಿಸಿದ್ದ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮಿಜಿ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಐತಿಹಾಸಿಕವಾಗಿ, ಸಮಸಮಾನತೆ, ಸಾಮಾಜಕ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಮಾಜ ಸುಧಾರಣೆಗೆ ಶ್ರಮಿಸಿದ ವಿಶ್ವಗುರು ಬಸವಣ್ಣ ಅವರ ನಾಡಿನಲ್ಲಿ ಬಸವಾದಿ ಶರಣರ ಆಶಯಗಳಂತೆ ಭಾಲ್ಕಿ ಹಿರೇಮಠ ಸೇವೆ ಸಲ್ಲಿಸುತ್ತಿದೆ. ಹಿರಿಯ ಸ್ವಾಮಿಜಿಗಳು ಬಸವಣ್ಣನ ತತ್ವ ಆದರ್ಶಗಳಂತೆ ಸತ್ಯ, ಸೇವೆ, ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಮಾಡುತ್ತಿರುವುದು ಹಾಗೂ ಅವರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಹಿರಿಯ ಸ್ವಾಮಿಗಳಾದ ಡಾ.ಚನ್ನಬಸವ ದೇವರು ತಮ್ಮ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರಲಿಲ್ಲ, ದಿನಾಚರಣೆ ದಿನ ನಿರಾಶ್ರಿತರಿಗೆ ಅನಾಥ, ದೀನ ದಲಿತರ ಸೇವೆಗೆ ಅರ್ಪಿಸಿದರು. ಕರುಣೆ ಸೇವೆಯ ನಿಜ ದಾರ್ಶನಿಕರಾಗಿದ್ದರು. ಅಸಾಧಾರಣ ಮಾನವೀಯ ಗುಣಧರ್ಮವುಳ್ಳವರಾಗಿದ್ದರು. ಅನ್ನ ದಾಸೋಹ ಹಾಗೂ ಅಕ್ಷರ ದಾಸೋಹದಿಂದ ಕ್ರಾಂತಿ ಮಾಡಿದರು. ಈಗಿನ ಸ್ವಾಮಿಗಳು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ 60 ಶಿಕ್ಷಣ ಸಂಸ್ಥೆಗಳಲ್ಲಿ 20 ಸಾವಿರ ವಿದ್ಯಾರ್ಥಿಗಳ ಜೀವನವನ್ನು ಈ ಹಿಂದುಳಿದ ಭಾಗದಲ್ಲಿ ಸುಧಾರಿಸಿದರು. ಶರಣ ತತ್ವ ಸಾಹಿತ್ಯ ಪ್ರವಚನ ಮೂಲಕ ಅಧ್ಯಾತ್ಮಿಕ ಕ್ರಾಂತಿ ಮಾಡಿದ್ದಾರೆ ಎಂದರು.
ನಾಗರಿಕ ಸೇವಾ ದಿನಾಚರಣೆಯೆಂದು ನಿನ್ನೆ ತಾವು ನಾಗರಿಕ ಸೇವೆಗಳಲ್ಲಿ ಮಹಿಳೆಯರ ಪಾತ್ರ ಕುರಿತು ಮಾತನಾಡಿದ್ದೇನು. ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಮಹಿಳೆಯೇ ಆಗಿರುವುದು ಸಂತೋಷ ಎಂದರು.
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಮಾತನಾಡಿ, ಬಸವಕಲ್ಯಾಣದ ಬಸವಾದಿ ಶರಣರ ಆದರ್ಶ, ತತ್ವ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಚನ್ನಬಸವ ಪಟ್ಟದೇವರು ಸಂಚರಿಸಿದ ಸಮಾಜ ಸುಧಾರಣೆಯ ನಾಡು ಇದು. ತ್ಯಾಗ, ಕರುಣೆ ಸೇವೆಯ ಸಾಕಾರ ಮೂರ್ತಿ ಆಗಿದ್ದಾರೆ. ಸಮಾಜ ಸೇವೆ, ಶೈಕ್ಷಣಿಕ ಧಾರ್ಮಿಕ ಸೇವೆ ಕೈಗೊಳ್ಳುತ್ತಿರುವ ಸಮಾಜದ ಸುಧಾರಕ ಎಂದು ಸಂತೋಷ ವ್ಯಕ್ತಪಡಿಸಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಬಸವಾದಿ ಶರಣರ ವಿಚಾರ ಧಾರೆ ಇಡೀ ಪ್ರಪಂಚಕ್ಕೆ ಪ್ರಚಾರ ಆಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಂಥ ಲೋಕಾರ್ಪಣೆ: 12ನೇ ಶತಮಾನದ ಬಸವಾದಿ ಶರಣರ ಸಾಮಾಜಿಕ ಕ್ರಾಂತಿ ಮತ್ತು ಅವರ ವೈಚಾರಿಕ ನಿಲುವುಗಳನ್ನು ವಿಶ್ಲೇಷಿಸುವ ಸಂಶೋಧನಾ ಕೃತಿ (ಶರಣರ ಕ್ರಾಂತಿ ಪಥ), ನಿತ್ಯ ಜೀವನಕ್ಕೆ ವಚನಗಳ ಪ್ರಸ್ತುತತೆಯನ್ನು ಸಾರುವ ಲೇಖನಗಳ ಸಂಗ್ರಹ (ವಚನ ವೈಭವ, ಸಂಪುಟಗಳು), ಭಾಲ್ಕಿ ಹಿರೇಮಠದ ಇತಿಹಾಸ ಮತ್ತು ಸಮಾಜ ಸೇವೆಯನ್ನು ದಾಖಲಿಸಿರುವ ಸ್ಮರಣ ಸಂಚಿಕೆ (ಮಠದ ಪರಂಪರೆ), ಶರಣರ ಅನುಭವ ಮಂಟಪದ ಚರ್ಚೆಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರುವ ಪುಸ್ತಕ (ಅನುಭವ ಮಂಟಪದ ಬೆಳಕು) ಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಬೀದರ್ ಲೋಕಸಭಾ ಸಂಸದರಾದ ಸಾಗರ ಈಶ್ವರ ಖಂಡ್ರೆ, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು, ಶ್ರೀ ಗುರುಬಸವ ಪಟ್ಟದ್ದೇವರು, ಗದಗ ಡಂಬಳದ ಸಿದ್ಧರಾಮ ಸ್ವಾಮೀಜಿ, ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ಶರಣ ಸಾಹಿತ್ಯ ಆಸಕ್ತರು, ಮಠದ ಭಕ್ತಾಧಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಬೀದರ ಜಿಲ್ಲೆಯ ವಿವಿಧ ಭಾಗಗಳ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.



