ಹೊಸದಿಗಂತ ಯಲ್ಲಾಪುರ:
ತಾಲೂಕಿನ ಅರಬೈಲ್ ಗ್ರಾಮದ ಪ್ರಸಿದ್ಧ ಶ್ರೀ ಶೇಡಿಕೆರೆ ಮಹಾಗಣಪತಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಕಳ್ಳತನ ಪ್ರಕರಣವನ್ನು ಯಲ್ಲಾಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಕಳವು ಮಾಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಏಪ್ರಿಲ್ 18ರ ಸಂಜೆ ಮತ್ತು 19ರ ಬೆಳಿಗ್ಗೆಯ ನಡುವಿನ ಸಮಯದಲ್ಲಿ ದೇವಸ್ಥಾನದ ಗರ್ಭಗುಡಿ ಹಾಗೂ ಪಕ್ಕದ ಕೊಠಡಿಗಳ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದರು. ಸುಮಾರು 19,900 ರೂ. ಮೌಲ್ಯದ ಹಿತ್ತಾಳೆ ಗಂಟೆಗಳು, ತಾಮ್ರದ ಕೊಡಗಳು, ಆರತಿ ಮತ್ತು ದೀಪಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಸುಣಜೋಗದ ನಿವಾಸಿ ಶಿವರಾಮ ಕೃಷ್ಣ ಭಟ್ಟ ಅವರು ನೀಡಿದ ದೂರಿನ ಮೇರೆಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ ಪೊಲೀಸರು, ಏಪ್ರಿಲ್ 22ರಂದು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದರು. ಈ ವೇಳೆ ಯಲ್ಲಾಪುರದ ಅಂಬೇಡ್ಕರ್ ನಗರ ನಿವಾಸಿ ಕೃಷ್ಣಾನಂದ (28) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಆರೋಪಿಯಿಂದ ಕಳ್ಳತನ ಮಾಡಿದ ಪೂಜಾ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಓಮ್ನಿ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ಒಟ್ಟು ಸ್ವತ್ತುಗಳ ಮೌಲ್ಯ ಸುಮಾರು 1,19,900 ರೂ. ಎಂದು ಅಂದಾಜಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ನಿರ್ದೇಶನದಡಿ, ಸಿಪಿಐ ರಮೇಶ್ ಹಾನಾಪುರ ನೇತೃತ್ವದಲ್ಲಿ ಪಿಎಸ್‌ಐಗಳಾದ ರಾಜಶೇಖರ ವಂದಲಿ, ಮಹಾವೀರ ಕಾಂಬಳೆ, ಶೇಡಜಿ ಚೌಹಾಣ ಹಾಗೂ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



