October 11, 2026
Sunday, October 11, 2026
spot_img

ದೆಹಲಿ ಅಂಗಳದಲ್ಲಿ ಡಿಕೆ ಬ್ರದರ್ಸ್ ಪವರ್ ಪ್ಲೇ: ಹೈಕಮಾಂಡ್‌ಗೆ ಎರಡು ‘ಖಡಕ್ ಷರತ್ತು’

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ದೆಹಲಿಯಲ್ಲಿ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ.

ಈ ಭೇಟಿಯ ವೇಳೆ ಅಧಿಕಾರ ಹಂಚಿಕೆ ವಿಚಾರವಾಗಿ ಎರಡು ಸ್ಪಷ್ಟ ಷರತ್ತುಗಳನ್ನು ಮುಂದಿಟ್ಟು, ನಿರ್ಧಾರಕ್ಕೆ ಗಡುವನ್ನೂ ನೀಡಿರುವ ಮಾಹಿತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಮೂಲಗಳ ಪ್ರಕಾರ, ಏಪ್ರಿಲ್ 29ರಿಂದ ಮೇ 4ರವರೆಗಿನ ಅವಧಿಯನ್ನು ಚರ್ಚೆಗೆ ಮೀಸಲಿಟ್ಟು, ಈ ವೇಳೆಯಲ್ಲಿ ಮುಖ್ಯಮಂತ್ರಿ ಸೇರಿ ಪ್ರಮುಖ ನಾಯಕರನ್ನು ಕರೆಸಿ ಸಮಾಲೋಚನೆ ನಡೆಸಬೇಕು ಎಂದು ಡಿಕೆ ಸಹೋದರರು ಒತ್ತಾಯಿಸಿದ್ದಾರೆ. ಅದಾದ ಬಳಿಕ ಮೇ 10ರೊಳಗೆ ಗೊಂದಲಗಳಿಗೆ ಅಂತಿಮ ತೆರೆ ಎಳೆದು, ಹೈಕಮಾಂಡ್ ತನ್ನ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಪಕ್ಷದ ನಿಷ್ಠೆ ಬಗ್ಗೆ ಯಾವುದೇ ಅನುಮಾನ ಬೇಡ, ಆದರೆ ನಿರಂತರ ಅನಿಶ್ಚಿತತೆ ಮುಂದುವರಿದರೆ ಶಾಸಕರ ಅಸಮಾಧಾನ ಹೆಚ್ಚಾಗಬಹುದು ಎಂಬ ಎಚ್ಚರಿಕೆಯನ್ನು ಸಹ ಡಿಕೆಶಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ತಾವು ಪಕ್ಷದ ವಿರುದ್ಧ ಹೆಜ್ಜೆ ಇಡುವುದಿಲ್ಲ, ಆದರೆ ಅಸಮಾಧಾನಗೊಂಡ ಶಾಸಕರ ನಡೆಗೆ ತಾವು ಹೊಣೆಗಾರರಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹೈಕಮಾಂಡ್ ನಾಯಕರು, ಎಲ್ಲ ಆಯಾಮಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಅಂತಿಮ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ಏಪ್ರಿಲ್ ಅಂತ್ಯದ ವೇಳೆಗೆ ರಾಹುಲ್ ಗಾಂಧಿ ದೆಹಲಿಗೆ ಮರಳಿದ ಬಳಿಕ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ.

Must Read