April 25, 2026
Saturday, April 25, 2026
spot_img

ಮೇ ತಿಂಗಳಲ್ಲಿ ಪಿಂಕ್ ಲೈನ್ ಉದ್ಘಾಟನೆ ಡೌಟ್? BEML ಘಟಕಕ್ಕೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ ನಮ್ಮ ಮೆಟ್ರೋ ‘ಪಿಂಕ್ ಲೈನ್’ ಕಾಮಗಾರಿ ಅಂತಿಮ ಹಂತಕ್ಕೆ ತಲುಪುತ್ತಿದ್ದು, ಈ ಮಾರ್ಗಕ್ಕಾಗಿ ತಯಾರಾಗುತ್ತಿರುವ ಅತ್ಯಾಧುನಿಕ ಚಾಲಕ ರಹಿತ ರೈಲುಗಳ ಪರಿಶೀಲನೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ನಡೆಸಿದರು.

ನಗರದ ಭಾರತ ಅರ್ಥ್ ಮೂವರ್ಸ್ ಲಿಮಿಟೆಡ್ ಘಟಕಕ್ಕೆ ಭೇಟಿ ನೀಡಿದ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು, ಮೆಟ್ರೋ ಬೋಗಿಗಳ ಉತ್ಪಾದನಾ ಪ್ರಗತಿಯನ್ನು ಖುದ್ದಾಗಿ ವೀಕ್ಷಿಸಿದರು. ಈ ಸಂದರ್ಭದಲ್ಲಿ ಬಿಇಎಂಎಲ್ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ಅವರು, ಯೋಜನೆಯ ಗುಣಮಟ್ಟ ಮತ್ತು ಕಾಲಮಿತಿಯ ಕುರಿತು ಚರ್ಚಿಸಿದರು.

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಈ ಪಿಂಕ್ ಲೈನ್ ಮಾರ್ಗವು ಒಟ್ಟು 21.25 ಕಿ.ಮೀ ಉದ್ದವಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ:

ಒಟ್ಟು ನಿಲ್ದಾಣಗಳು: 18 (12 ಸುರಂಗ ಮಾರ್ಗ ಮತ್ತು 6 ಎಲಿವೇಟೆಡ್ ನಿಲ್ದಾಣಗಳು).

ಈ ಮಾರ್ಗಕ್ಕಾಗಿ ಬಿಇಎಂಎಲ್ ಸಂಸ್ಥೆಯು ಒಟ್ಟು 23 ಚಾಲಕ ರಹಿತ ರೈಲುಗಳನ್ನು ಸಿದ್ಧಪಡಿಸುತ್ತಿದೆ.

ಈಗಾಗಲೇ 5 ರೈಲುಗಳು ಬಿಎಂಆರ್‌ಸಿಎಲ್ ಕೈಸೇರಿವೆ.

ಬಿಎಂಆರ್‌ಸಿಎಲ್ ಮೂಲಗಳ ಪ್ರಕಾರ, ಪಿಂಕ್ ಲೈನ್‌ನ ಮೊದಲ ಹಂತದ 6 ನಿಲ್ದಾಣಗಳನ್ನು ಮೇ ತಿಂಗಳಲ್ಲಿ ಸಾರ್ವಜನಿಕ ಮುಕ್ತಗೊಳಿಸಲು ಯೋಜಿಸಲಾಗಿತ್ತು. ಆದರೆ, ತಾಂತ್ರಿಕ ಪರೀಕ್ಷೆಗಳು ಇನ್ನು ಪೂರ್ಣಗೊಳ್ಳದ ಕಾರಣ, ಉದ್ಘಾಟನೆಯು ಜೂನ್ ಅಥವಾ ಜುಲೈ ತಿಂಗಳಿಗೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಮಾರ್ಗ ಸಿದ್ಧವಾದಾಗ ರೈಲುಗಳ ಕೊರತೆ ಇರುತ್ತಿತ್ತು, ಆದರೆ ಈ ಬಾರಿ ರೈಲುಗಳು ಸಿದ್ಧವಿದ್ದರೂ ಟೆಸ್ಟಿಂಗ್ ಪ್ರಕ್ರಿಯೆಯಿಂದಾಗಿ ವಿಳಂಬವಾಗುತ್ತಿದೆ. ಇನ್ನುಳಿದ 13.76 ಕಿ.ಮೀ ಉದ್ದದ ಸುರಂಗ ಮಾರ್ಗದ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಈ ವರ್ಷದ ಅಂತ್ಯದ ವೇಳೆಗೆ ಇಡೀ ಪಿಂಕ್ ಲೈನ್ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !