ಹೊಸದಿಗಂತ ವಿಜಯಪುರ:
ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರವಲಯದಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ರಾಷ್ಟ್ರೀಯ ಹೆದ್ದಾರಿ-218ರ ಗಾಣದೇವಿ ಸರ್ಕಲ್ ಸಮೀಪ ಈ ದುರ್ಘಟನೆ ಸಂಭವಿಸಿದೆ.
ಸಾರಿಗೆ ಬಸ್ ಹಾಗೂ ಮೋಟಾರ್ ಸೈಕಲ್ ನಡುವೆ ಉಂಟಾದ ಜೋರಾದ ಡಿಕ್ಕಿಯಿಂದಾಗಿ ಬೈಕ್ ಸವಾರ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ವಿಜಯಪುರ ಮೂಲದ ಆಕಾಶ ಭೀಮಪ್ಪ ಬಬಲೇಶ್ವರ ಉರ್ಫ ಬಂಡಿವಡ್ಡರ (26) ಎಂದು ಗುರುತಿಸಲಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿದ ಕೊಲ್ಹಾರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾರಿಗೆ ಬಸ್ ಚಾಲಕನ ವಿರುದ್ಧ ತನಿಖೆ ಮುಂದುವರಿದಿದೆ.
ರಾಷ್ಟ್ರೀಯ ಹೆದ್ದಾರಿ-218ರಲ್ಲಿ ವಾಹನಗಳ ವೇಗ ಮಿತಿ ಮೀರುತ್ತಿರುವುದು ಮತ್ತು ಸರ್ಕಲ್‌ಗಳ ಬಳಿ ಎಚ್ಚರಿಕೆ ವಹಿಸದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.



