August 29, 2026
Saturday, August 29, 2026
spot_img

ರಾಯಚೂರು ಮೂಲದ ನವಜೋಡಿಗೆ ಪ್ರಧಾನಿ ಮೋದಿಯಿಂದ ಸರ್ಪ್ರೈಸ್ ಗಿಫ್ಟ್: ಕಳುಹಿಸಿಕೊಟ್ಟರು ವಿಶೇಷ ಪತ್ರ!

ಹೊಸದಿಗಂತ ರಾಯಚೂರು:

ಜಿಲ್ಲೆಯ ಸಿಂಧನೂರು ತಾಲೂಕಿನ ಕಾನಿಹಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ವಿವಾಹವೊಂದು ಈಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಇಲ್ಲಿನ ಯುವಕ ರಾಜೇಶ್ ಚಿದಾನಂದಪ್ಪ ಕುರ್ಲಿ ಅವರ ಮದುವೆಗೆ ಸ್ವತಃ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಭ ಕೋರಿ ಪತ್ರ ಬರೆದಿದ್ದು, ಇಡೀ ಗ್ರಾಮದಲ್ಲಿ ಅಚ್ಚರಿ ಮತ್ತು ಸಂತಸ ಮೂಡಿಸಿದೆ.

ಯುವಕ ರಾಜೇಶ್, ಏಪ್ರಿಲ್ 13 ರಂದು ಸವಿತಾ ಎಂಬುವವರ ಜೊತೆ ಹಸೆಮಣೆ ಏರಿದ್ದರು. ತಮ್ಮ ಮದುವೆಗೆ ಪ್ರಧಾನಿ ಮೋದಿ ಅವರಿಗೆ ಆಮಂತ್ರಣ ಪತ್ರ ಕಳುಹಿಸಿದ್ದ ರಾಜೇಶ್‌ಗೆ, ಪ್ರಧಾನಿ ಕಛೇರಿಯಿಂದ (PMO) ಮರು ಉತ್ತರ ಬರಬಹುದು ಎಂಬ ನಿರೀಕ್ಷೆಯಿರಲಿಲ್ಲ. ಆದರೆ, ಪ್ರಧಾನಿಯವರು ನವಜೋಡಿಗೆ ಸುಖ, ಶಾಂತಿ, ನೆಮ್ಮದಿ ಮತ್ತು ಆರೋಗ್ಯಯುತ ಜೀವನ ನಡೆಸಲಿ ಎಂದು ಹಾರೈಸಿ ಕಳುಹಿಸಿದ ಪತ್ರ ಕಂಡು ಕುಟುಂಬಸ್ಥರು ಭಾವುಕರಾಗಿದ್ದಾರೆ.

ರಾಜೇಶ್ ಅವರ ತಂದೆ ಚಿದಾನಂದಪ್ಪ ಕುರ್ಲಿ, ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡ ಅವರು, “ನಮ್ಮ ಮಗನ ವಿವಾಹಕ್ಕೆ ಪ್ರಧಾನಿಯವರು ಸಮಯ ಮೀಸಲಿಟ್ಟು ಶುಭ ಹಾರೈಸಿರುವುದು ನಮ್ಮ ಕುಟುಂಬಕ್ಕೆ ಸಂದ ಅತಿ ದೊಡ್ಡ ಗೌರವ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಕಛೇರಿಯಿಂದ ಬಂದಿರುವ ಈ ಪತ್ರ ಈಗ ರಾಯಚೂರು ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಒಬ್ಬ ಸಾಮಾನ್ಯ ಕಾರ್ಯಕರ್ತನ ಕುಟುಂಬದ ಆಹ್ವಾನಕ್ಕೆ ಪ್ರಧಾನಿಯವರು ಸ್ಪಂದಿಸಿದ ರೀತಿ ಜನರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಸದ್ಯ ಈ ಪತ್ರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !