June 19, 2026
Friday, June 19, 2026
spot_img

IPLನಲ್ಲಿ ‘ಧಮ್ ಮಾರೋ ಧಮ್: ಡ್ರೆಸ್ಸಿಂಗ್ ರೂಮ್‌ನಲ್ಲಿ ‘ವೇಪಿಂಗ್’ ಮಾಡಿದ್ರಾ ರಿಯಾನ್ ಪರಾಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಿಯಾನ್ ಪರಾಗ್ ಹೆಸರು ಇದೀಗ ಐಪಿಎಲ್‌ನಲ್ಲಿ ಮತ್ತೊಂದು ವಿವಾದದ ಕೇಂದ್ರಬಿಂದುವಾಗಿದೆ. ಐಪಿಎಲ್‌ ಪಂದ್ಯ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರು ವೇಪ್ (E-Cigarette) ಬಳಸುತ್ತಿರುವಂತೆ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 29 ರನ್‌ಗಳಿಸಿ ಔಟಾದ ಬಳಿಕ ಪರಾಗ್ ಪೆವಿಲಿಯನ್‌ಗೆ ಮರಳಿದ್ದರು. ನಂತರ ಪ್ರಸಾರವಾದ ದೃಶ್ಯಗಳಲ್ಲಿ ಅವರು ಎಲೆಕ್ಟ್ರಾನಿಕ್ ಸಿಗರೇಟ್ ರೀತಿಯ ಸಾಧನ ಬಳಸುತ್ತಿರುವಂತೆ ಕಂಡುಬಂದಿದೆ ಎನ್ನಲಾಗಿದ್ದು, ಈ ಕ್ಲಿಪ್‌ಗಳು ವೇಗವಾಗಿ ಹರಿದಾಡುತ್ತಿವೆ.

ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹಲವು ಪ್ರಶ್ನೆಗಳು ಎದ್ದಿವೆ. ಭಾರತದಲ್ಲಿ ಇ-ಸಿಗರೇಟ್ ಮಾರಾಟ ಮತ್ತು ಬಳಕೆಗೆ ಸಂಬಂಧಿಸಿದ ಕಟ್ಟುನಿಟ್ಟಿನ ನಿಯಮಗಳಿವೆ. ಜೊತೆಗೆ ಕ್ರೀಡಾಂಗಣದ ಶಿಸ್ತಿನ ಕುರಿತಂತೆ ಬಿಸಿಸಿಐ ಪಾಲಿಸಬೇಕಾದ ಮಾರ್ಗಸೂಚಿಗಳೂ ಇದ್ದು, ಆಟಗಾರರ ವರ್ತನೆ ಯುವಜನತೆಗೆ ಯಾವ ಸಂದೇಶ ನೀಡುತ್ತದೆ ಎಂಬ ಚರ್ಚೆಯೂ ಜೋರಾಗಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿರುವ ಪರಾಗ್ ಈಗಾಗಲೇ ಪ್ರದರ್ಶನದ ವಿಚಾರದಲ್ಲಿ ಟೀಕೆ ಎದುರಿಸುತ್ತಿರುವ ನಡುವೆ, ಈ ವಿಡಿಯೋ ಮತ್ತಷ್ಟು ಒತ್ತಡ ಹೆಚ್ಚಿಸಿದೆ. ಬಿಸಿಸಿಐ ಅಥವಾ ಐಪಿಎಲ್ ಆಡಳಿತ ಮಂಡಳಿ ಈ ಬಗ್ಗೆ ಅಧಿಕೃತವಾಗಿ ಸ್ಪಷ್ಟನೆ ನೀಡುತ್ತದೆಯೇ ಎಂಬ ಕುತೂಹಲ ಮೂಡಿದೆ.

ವಿಡಿಯೋದ ಸತ್ಯಾಸತ್ಯತೆ ಹಾಗೂ ಸಂದರ್ಭದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಂದ ಬಳಿಕವೇ ಮುಂದಿನ ಕ್ರಮ ಏನಾಗಬಹುದು ಎಂಬುದು ತಿಳಿಯಲಿದೆ. ಸದ್ಯ ಕ್ರಿಕೆಟ್ ಅಭಿಮಾನಿಗಳ ಗಮನ ಈ ಬೆಳವಣಿಗೆಯತ್ತ ನೆಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !