April 29, 2026
Wednesday, April 29, 2026
spot_img

ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳೋಕೆ ‘ಜೇಬಿನಲ್ಲಿ ಈರುಳ್ಳಿ’ ಇಟ್ಟುಕೊಳ್ಳಿ: ಕೇಂದ್ರ ಸಚಿವರ ಸಲಹೆ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೀಡಿದ ಒಂದು ವಿಶಿಷ್ಟ ಸಲಹೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ತೀವ್ರ ಬಿಸಿಲಿನಿಂದ ದೇಹವನ್ನು ಕಾಪಾಡಿಕೊಳ್ಳಲು ಜೇಬಿನಲ್ಲಿ ಒಂದು ಈರುಳ್ಳಿ ಇಟ್ಟುಕೊಳ್ಳಿ ಎಂದು ಅವರು ಜನರಿಗೆ ಕರೆ ನೀಡಿದ್ದಾರೆ. ಶಿವಪುರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಿರಿಯರು ಅನುಸರಿಸುತ್ತಿದ್ದ ಸಾಂಪ್ರದಾಯಿಕ ವಿಧಾನಗಳಲ್ಲಿ ಆರೋಗ್ಯದ ಹಲವಾರು ಗುಟ್ಟುಗಳು ಅಡಗಿವೆ ಎಂದು ಹೇಳಿದರು. “ನಾನು ಸ್ವತಃ ಈ ಕ್ರಮವನ್ನು ಪಾಲಿಸುತ್ತೇನೆ” ಎಂದು ಹೇಳಿದ ಸಚಿವರು, ತಮ್ಮ ವಾಹನದಿಂದ ಈರುಳ್ಳಿ ತೆಗೆದು ತೋರಿಸಿ ಎಲ್ಲರ ಗಮನ ಸೆಳೆದರು.

ತೀವ್ರ ಬಿಸಿಲಿನ ಸಂದರ್ಭಗಳಲ್ಲಿ ದೇಹದ ಆರೈಕೆಯಲ್ಲಿ ಹಳೆಯ ಪದ್ಧತಿಗಳಿಗೆ ಮಹತ್ವ ಇದೆ ಎಂದು ಅವರು ಒತ್ತಿಹೇಳಿದರು. ಅತಿಯಾದ ತಾಪಮಾನದಲ್ಲೂ ತಾವು ಏರ್ ಕಂಡೀಷನರ್ ಬಳಕೆ ತಪ್ಪಿಸುವುದಾಗಿ ಹೇಳಿದ ಸಿಂಧಿಯಾ, ದೇಹವು ಪ್ರಕೃತಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಆಯುರ್ವೇದದ ನಂಬಿಕೆಗಳ ಪ್ರಕಾರ ಈರುಳ್ಳಿ ದೇಹಕ್ಕೆ ತಂಪು ನೀಡುವ ಗುಣ ಹೊಂದಿದೆ ಎನ್ನಲಾಗುತ್ತದೆ. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಈರುಳ್ಳಿ ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ ಎಂಬ ಮಾತಿದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಆಹಾರದಲ್ಲಿ ಈರುಳ್ಳಿಯ ಬಳಕೆ ಹೆಚ್ಚಾಗುತ್ತದೆ. ಸಚಿವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಇದನ್ನು ಪರಂಪರೆಯ ಜ್ಞಾನ ಎಂದು ಮೆಚ್ಚಿದರೆ, ಇನ್ನೂ ಕೆಲವರು ವೈಜ್ಞಾನಿಕ ಆಧಾರಗಳ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !