ಕರ್ನಾಟಕದಲ್ಲಿ ಸೂರ್ಯನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇಂದೂ ಕೂಡ ಬಿಸಿಲಿನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಇರಲಿದ್ದು, ಕೇವಲ ಕೆಲವು ಪ್ರದೇಶಗಳಲ್ಲಿ ಮಾತ್ರ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.
ಬಿಸಿಲ ನಾಡು ಎಂದೇ ಹೆಸರಾದ ಕಲಬುರಗಿ ಮತ್ತು ಬೀದರ್ನಲ್ಲಿ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಇಲ್ಲಿ ಉಷ್ಣಾಂಶವು 39 ರಿಂದ 40 ಡಿಗ್ರಿ ಸೆಲ್ಸಿಯಸ್ವರೆಗೆ ಇರಲಿದ್ದು, ತೀವ್ರ ಸೆಖೆಯಿಂದ ಜನರು ಸಂಕಷ್ಟ ಎದುರಿಸಲಿದ್ದಾರೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಧಾರವಾಡದಂತಹ ಉತ್ತರ ಒಳನಾಡು ಜಿಲ್ಲೆಗಳಲ್ಲಿಯೂ ಬಿಸಿ ಗಾಳಿಯ ವಾತಾವರಣ ಮುಂದುವರಿಯಲಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಅಂತಹ ದೊಡ್ಡ ಬದಲಾವಣೆ ಇಲ್ಲದಿದ್ದರೂ, ತೇವಾಂಶದ ಕಾರಣದಿಂದಾಗಿ ಜನರಿಗೆ ತೀವ್ರ ಸೆಕೆಯ ಅನುಭವವಾಗಲಿದೆ. ಮೈಸೂರು, ಮಂಡ್ಯ, ತುಮಕೂರು ಮತ್ತು ಚಾಮರಾಜನಗರದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಉಷ್ಣಾಂಶವು 36-38 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ.
ಮಂಗಳೂರು, ಕಾರವಾರ ಮತ್ತು ಉಡುಪಿ ಭಾಗದಲ್ಲಿ ತೇವಾಂಶದ ಪ್ರಮಾಣ ಹೆಚ್ಚಿರಲಿದೆ. ಹವಾಮಾನ ಇಲಾಖೆಯು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಬಿಸಿ ಗಾಳಿ ಹಾಗೂ ತೇವಾಂಶದ ಬಗ್ಗೆ ಎಚ್ಚರಿಕೆ ನೀಡಿದೆ. ಆದರೆ, ಕರಾವಳಿಯ ಕೆಲವು ಭಾಗಗಳಲ್ಲಿ ಇಂದು ಸಣ್ಣ ಪ್ರಮಾಣದ ತುಂತುರು ಮಳೆಯಾಗುವ ನಿರೀಕ್ಷೆಯೂ ಇದೆ.



