May 1, 2026
Friday, May 1, 2026
spot_img

ಗಿಲ್ ಅಬ್ಬರ, ಅರ್ಶದ್ ಖಾನ್ ಬೌಲಿಂಗ್ ಪರಾಕ್ರಮ: ಟೈಟಾನ್ಸ್ ಅಬ್ಬರಕ್ಕೆ ಮಣಿದ ಚಾಲೆಂಜರ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ನೀಡಿದ ಗುಜರಾತ್ ಟೈಟನ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಆರ್‌ಸಿಬಿ ನೀಡಿದ 156 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಗುಜರಾತ್, ಇನ್ನೂ 25 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿ ಜಯಭೇರಿ ಬಾರಿಸಿತು.

ಬೃಹತ್ ಗುರಿಯಲ್ಲದಿದ್ದರೂ ಚೇಸಿಂಗ್ ಆರಂಭಿಸಿದ ಗುಜರಾತ್ ತಂಡಕ್ಕೆ ನಾಯಕ ಶುಭ್‌ಮನ್ ಗಿಲ್ ಸ್ಫೋಟಕ ಆರಂಭ ನೀಡಿದರು. ಕೇವಲ 18 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿದ ಗಿಲ್ 43 ರನ್ ಚಚ್ಚಿದರು. ಅವರಿಗೆ ಸಾಥ್ ನೀಡಿದ ಜೋಶ್ ಬಟ್ಲರ್ 19 ಎಸೆತಗಳಲ್ಲಿ 39 ರನ್ ಬಾರಿಸಿ ಜಯದ ಹಾದಿಯನ್ನು ಸುಗಮಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ (27) ಜವಾಬ್ದಾರಿಯುತ ಆಟವಾಡಿದರು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದು ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಒಂದು ಹಂತದಲ್ಲಿ 7.3 ಓವರ್‌ಗಳಲ್ಲಿ 79 ರನ್ ಗಳಿಸಿ ಬಲಿಷ್ಠ ಸ್ಥಿತಿಯಲ್ಲಿತ್ತು. ಆದರೆ 8ನೇ ಓವರ್‌ನಲ್ಲಿ ನಡೆದ ಒಂದು ಘಟನೆ ಪಂದ್ಯದ ದಿಕ್ಕನ್ನೇ ಬದಲಿಸಿತು. ಅರ್ಶದ್ ಖಾನ್ ಎಸೆತದಲ್ಲಿ ರಜತ್ ಪಾಟಿದಾರ್ ಹೊಡೆದ ಕ್ಯಾಚನ್ನು ಜೇಸನ್ ಹೋಲ್ಡರ್ ಹಿಡಿದರು. ಆದರೆ ಚೆಂಡು ನೆಲಕ್ಕೆ ತಗುಲಿದ್ದು ಸ್ಪಷ್ಟವಾಗಿ ಕಂಡರೂ, ಥರ್ಡ್ ಅಂಪೈರ್ ಪಾಟಿದಾರ್‌ಗೆ ಔಟ್ ನೀಡಿದ್ದು ವಿವಾದಕ್ಕೆ ಕಾರಣವಾಯಿತು. ಈ ವಿಕೆಟ್ ಪತನದ ನಂತರ ಆರ್‌ಸಿಬಿ ಚೇತರಿಸಿಕೊಳ್ಳಲೇ ಇಲ್ಲ.

ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ (40) ಮತ್ತು ವಿರಾಟ್ ಕೊಹ್ಲಿ (24) ಉತ್ತಮ ಆರಂಭ ನೀಡಿದರೂ ದೊಡ್ಡ ಮೊತ್ತ ಕಲೆಹಾಕಲು ವಿಫಲರಾದರು. ಗುಜರಾತ್ ಪರ ಘಾತಕ ಬೌಲಿಂಗ್ ಪ್ರದರ್ಶಿಸಿದ ಅರ್ಶದ್ ಖಾನ್ 3 ವಿಕೆಟ್ ಪಡೆದರೆ, ಜೇಸನ್ ಹೋಲ್ಡರ್ ಮತ್ತು ರಶೀದ್ ಖಾನ್ ತಲಾ 2 ವಿಕೆಟ್ ಕಿತ್ತು ಆರ್‌ಸಿಬಿಯನ್ನು 155 ರನ್‌ಗಳಿಗೆ ಕಟ್ಟಿಹಾಕಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !