May 2, 2026
Saturday, May 2, 2026
spot_img

ಹೀಟ್ ವೇವ್ ನಡುವೆ ತಂಪಾದ ಸುದ್ದಿ: ಮೇ ತಿಂಗಳಲ್ಲೇ ಸುರಿಯಲಿದ್ದಾನೆ ಮಳೆರಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಾದ್ಯಂತ ಸುಡುತ್ತಿರುವ ಭೀಕರ ಬಿಸಿಲಿನಿಂದ ಕಂಗೆಟ್ಟಿರುವ ಜನತೆಗೆ ಭಾರತೀಯ ಹವಾಮಾನ ಇಲಾಖೆ ತಂಪಾದ ಸುದ್ದಿಯೊಂದನ್ನು ನೀಡಿದೆ. ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಮೇ 14 ರಿಂದ 16 ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಐಎಂಡಿ ಮಹಾನಿರ್ದೇಶಕರಾದ ಮೃತ್ಯುಂಜಯ್ ಮೊಹಾಪಾತ್ರ ಅವರು ಬಿಡುಗಡೆ ಮಾಡಿದ ಮಾಸಿಕ ವರದಿಯ ಪ್ರಕಾರ, ಈ ಬಾರಿ ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಇದು ಪ್ರಸ್ತುತ ಇರುವ ಉರಿಬಿಸಿಲಿನ ವಾತಾವರಣವನ್ನು ತಗ್ಗಿಸಿ, ಜನರಿಗೆ ನೆಮ್ಮದಿ ನೀಡಲಿದೆ.

ಎಲ್ಲೆಲ್ಲಿ ಮಳೆ? ಎಲ್ಲೆಲ್ಲಿ ಬಿಸಿಲು?

ದೇಶಾದ್ಯಂತ ಸರಾಸರಿ ಮಳೆ ಪ್ರಮಾಣ ಹೆಚ್ಚಿರಲಿದ್ದರೂ, ದಕ್ಷಿಣ ಭಾರತ ಮತ್ತು ವಾಯುವ್ಯ ಭಾಗಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ.

ಪೂರ್ವ, ಈಶಾನ್ಯ ಮತ್ತು ಪೂರ್ವ ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ಇರಬಹುದು ಎಂದು ಇಲಾಖೆ ತಿಳಿಸಿದೆ.

ಮಳೆ ಮುನ್ಸೂಚನೆ ಇದ್ದರೂ ಸಹ, ಮೇ ತಿಂಗಳಲ್ಲಿ ದೇಶದ ಅನೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ.

ಗುಜರಾತ್, ಮಹಾರಾಷ್ಟ್ರ, ಪೂರ್ವ ಕರಾವಳಿ ರಾಜ್ಯಗಳು ಮತ್ತು ಹಿಮಾಲಯದ ತಪ್ಪಲಿನ ಕೆಲವು ಭಾಗಗಳಲ್ಲಿ ಶಾಖದ ಅಲೆಯ ಪ್ರಭಾವ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯಲಿದೆ.

ಮೇ ತಿಂಗಳ ಮಧ್ಯಭಾಗದಲ್ಲೇ ಮುಂಗಾರು ಮಾರುತಗಳು ಅಂಡಮಾನ್ ಪ್ರವೇಶಿಸುತ್ತಿರುವುದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಲಿದೆ. ನೈಋತ್ಯ ಮುಂಗಾರು ಅಂಡಮಾನ್ ದಾಟಿ ಕೇರಳದತ್ತ ಸಾಗಲು ಸಜ್ಜಾಗುತ್ತಿದ್ದು, ಜೂನ್ ಮೊದಲ ವಾರದ ವೇಳೆಗೆ ಭಾರತದ ಮುಖ್ಯ ಭೂಭಾಗವನ್ನು ತಲುಪುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !