ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಫ್ರಾಂಚೈಸಿಗಳ ಮೌಲ್ಯ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ನಡುವೆಯೇ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕತ್ವದಲ್ಲಿ ಮಹತ್ವದ ಬದಲಾವಣೆ ನಡೆದಿದೆ.
ಹೊಸ ಒಪ್ಪಂದದ ಪ್ರಕಾರ, ಭಾರತೀಯ ಉಕ್ಕು ಉದ್ಯಮದ ದಿಗ್ಗಜ ಲಕ್ಷ್ಮಿ ಮಿತ್ತಲ್ ಕುಟುಂಬ ಹಾಗೂ ಸೀರಮ್ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ ಒಕ್ಕೂಟವಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಸುಮಾರು 15,660 ಕೋಟಿ ರೂಪಾಯಿಗೆ ಖರೀದಿಸಿದೆ ಎನ್ನಲಾಗಿದೆ.
ಈ ಡೀಲ್ ಮೂಲಕ ಮಿತ್ತಲ್ ಕುಟುಂಬ ತಂಡದ ಶೇ.75ರಷ್ಟು ಪಾಲು ಪಡೆದು ಪ್ರಮುಖ ಹಿಡಿತ ಸಾಧಿಸಿದ್ದು, ಅದಾರ್ ಪೂನಾವಾಲಾ ಶೇ.18ರಷ್ಟು ಹಂಚಿಕೆಯನ್ನು ಹೊಂದಲಿದ್ದಾರೆ. ಹಿಂದಿನ ಮಾಲೀಕರಾದ ಮನೋಜ್ ಬದಾಲೆ ಅವರ ಬಳಿ ಶೇ.7ರಷ್ಟು ಪಾಲು ಉಳಿಯಲಿದೆ. ಐಪಿಎಲ್ ಜೊತೆಗೆ ದಕ್ಷಿಣ ಆಫ್ರಿಕಾ ಮತ್ತು ಕೆರೀಬಿಯನ್ ಲೀಗ್‌ಗಳಲ್ಲಿ ಇರುವ ರಾಯಲ್ಸ್ ಬ್ರ್ಯಾಂಡ್ ತಂಡಗಳ ಮಾಲೀಕತ್ವವೂ ಈ ಒಪ್ಪಂದದಲ್ಲಿ ಸೇರಿದೆ.
ಇದನ್ನೂ ಓದಿ:
ರಾಜಸ್ಥಾನ ಮೂಲದವರಾದ ಲಕ್ಷ್ಮಿ ಮಿತ್ತಲ್ ಅವರಿಗೆ ಈ ಖರೀದಿ ವಿಶೇಷ ಮಹತ್ವ ಪಡೆದಿದೆ. ಕ್ರಿಕೆಟ್ ಮೇಲಿನ ಆಸಕ್ತಿ ಹಾಗೂ ರಾಜಸ್ಥಾನದೊಂದಿಗೆ ಇರುವ ನಂಟು ಈ ನಿರ್ಧಾರಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಐಪಿಎಲ್ ಇತಿಹಾಸದಲ್ಲೇ ಇದು ಎರಡನೇ ಅತಿ ದೊಡ್ಡ ಫ್ರಾಂಚೈಸಿ ಡೀಲ್ ಎನ್ನಲಾಗಿದ್ದು, ಕ್ರಿಕೆಟ್ ವಾಣಿಜ್ಯ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿದೆ.



