ಹೊಸದಿಗಂತ ವರದಿ, ಮಡಿಕೇರಿ:
ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಸಾಧಿಸಿದ ಅದ್ಭುತ ಗೆಲುವಿನ ಕಾರ್ಯತಂತ್ರವನ್ನೇ ಕರ್ನಾಟಕದಲ್ಲಿ 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಬಳಸಿಕೊಂಡು ಈ ರಾಜ್ಯದಲ್ಲಿಯೂ ಗೆಲವು ಸಾಧಿಸಲಾಗುತ್ತದೆ ಎಂದು ಕೊಡಗು – ಮೈಸೂರು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಮಾದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಬಂಗಾಲದ ಗೆಲವು ಬಿಜೆಪಿಯಲ್ಲಿ ಮತ್ತೆ ಹೊಸ ಸಂಭ್ರಮ, ಉತ್ಸಾಹ ಮೂಡಿಸಿದೆ. 2028ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿಯೂ ಬಂಗಾಲದ ಮಾದರಿಯನ್ನು ಅನುಸರಿಸಿ ಬಿಜೆಪಿ ಕಾರ್ಯಕರ್ತರ ಪಡೆಯೊಂದಿಗೆ ಮತದಾರರ ಮನೆ ಮನ ತಲುಪಲಿದೆ. ಈ ಮೂಲಕ ಜನವಿರೋಧಿ ಕಾಂಗ್ರೆಸ್ ಸರ್ಕಾರದ ಅಂತ್ಯವಾಗಲಿದೆ ಎಂದೂ ಯದುವೀರ್ ಹೇಳಿದರು.



